ಬೆಳಗಾವಿ, ಡಿ 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಾವೇರಿ ಭಾಷಣಕ್ಕೆ ವ್ಯಂಗ್ಯವಾಡುತ್ತಾ ಸೋಮವಾರದಂದು (ಡಿ 20) ನೀಡಿದ್ದ ಹೇಳಿಕೆಗೆ ಇಂದು, ವಿಧಾನಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕ್ಷಮೆಯಾಚಿಸಿದ್ದಾರೆ.
“ಅಳಬ್ಯಾಡ ತಂಗಿ ಅಳಬ್ಯಾಡ, ಬೊಮ್ಮಣ್ಣ ಅಳಬೇಡ. ಈಗ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಜಾಗ ಖಾಲಿ ಮಾಡುವ ಎನ್ನುವ ಸೂಚನೆ ಅವರಿಗೆ ಸಿಕ್ಕಿದೆ, ಅದಕ್ಕೆ ಯಾವುದೂ ಶಾಸ್ವತವಲ್ಲ ಎಂದು ಅವರು ಹೇಳುತ್ತಿದ್ದಾರೆ” ಎಂದು ಬೊಮ್ಮಾಯಿ ಭಾಷಣವನ್ನು ಇಬ್ರಾಹಿಂ ಲೇವಡಿ ಮಾಡಿದ್ದರು. ಇದಕ್ಕೆ ಇಬ್ರಾಹಿಂ ಕ್ಷಮೆಯಾಚಿಸಿದ್ದು ಹೀಗೆ..
ಮಡಿವಾಳ ಸಮಾಜಕ್ಕೆ ನೋವು ಉಂಟು ಮಾಡಿದೆ ಎನ್ನುವ ದೂರು ಬಂದಿರುವ ಹಿನ್ನಲೆ
ದೋಬಿಕಾ ಕುತ್ತಾ ನ ಘರ್ ಕಾ, ನ ಬಸ್ ಸ್ಟ್ಯಾಂಡ್ಕಾ ಎನ್ನುವ ಪದ ಪ್ರಯೋಗ, ಮಡಿವಾಳ ಸಮಾಜಕ್ಕೆ ನೋವು ಉಂಟು ಮಾಡಿದೆ ಎನ್ನುವ ದೂರು ಬಂದಿರುವ ಹಿನ್ನಲೆಯಲ್ಲಿ ಸಿ.ಎಂ.ಇಬ್ರಾಹಿಂ, ಆ ಸಮುದಾಯದ ಬೇಷರತ್ ಕ್ಷಮೆಯಾಚಿಸಿದ್ದಾರೆ. ಸಮುದಾಯದ ನಾಯಕರು ದೂರವಾಣಿ ಮೂಲಕ ಇಬ್ರಾಹಿಂ ಅವರಲ್ಲಿ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದರೊಂದಿಗೆ ಇಬ್ರಾಹಿಂ ಕ್ಷಮೆಯಾಚಿಸಿದರು.