ಬೆಳಗಾವಿ, ಡಿಸೆಂಬರ್ 21: ವಿಧಾನಸಭೆಯ ಅಧಿವೇಶನದ ಆರಂಭದಿಂದ ಅಂತ್ಯದವರೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಖದರ್ ದಿನವೂ ಇರುತ್ತದೆ. ತಮ್ಮ ಅನುಭವವನ್ನು ತಮ್ಮದೇ ರೀತಿಯಲ್ಲಿ ಪ್ರಸ್ತಾವಿಸುವಾಗ ವಿರೋಧಿಗಳೂ ಕಿವಿಗೊಟ್ಟು ಕೇಳುತ್ತಾರೆ.
ಚಳಿಗಾಲದ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಅಹಿಂದ, ಬೆಳಗಾವಿ ಗಲಾಟೆ ಸೇರಿದಂತೆ, ಅಂದು ಕಾಂಗ್ರೆಸ್ ಬರಲು ಕಾರಣರಾದವರು ಯಾರು ಎನ್ನುವುದನ್ನೂ ಸವಿಸ್ತಾರವಾಗಿ ವಿವರಿಸಿದ್ದಾರೆ.
ಎಂಇಎಸ್ ಪುಂಡರ ಬಗ್ಗೆ ಸದನದಲ್ಲಿ ಪ್ರಸ್ತಾವಿಸಿದ ಸಿದ್ದರಾಮಯ್ಯ, “ಅವರು ಈ ನೆಲದಲ್ಲಿ ಇದ್ದಾರೆ, ನಮ್ಮ ಭಾಷೆ, ನಮ್ಮ ಸಂಸ್ಕೃತಿಗೆ ಗೌರವ ಕೊಡುವುದು ಅವರ ಕರ್ತವ್ಯ. ಇವರನ್ನು ಮಟ್ಟ ಹಾಕಲೇ ಬೇಕು. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದಿಲ್ಲ, ಎಲ್ಲರೂ ಒಂದೇ”ಎಂದು ಸಿದ್ದರಾಮಯ್ಯ ಹೇಳಿದರು.
“ನಾನು ಕಾಂಗ್ರೆಸ್ ಪಕ್ಷಕ್ಕೆ ಬರಲು ಇಬ್ಬರು ಕಾರಣ, ಆದರೆ ಅವರಿಬ್ಬರೂ ಈಗ ನಮ್ಮ ಜೊತೆಗಿಲ್ಲ”ಎಂದು ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅವರನ್ನು ಎಂದಿಗೂ ನಾನು ಸ್ಮರಿಸಿಕೊಳ್ಳುತ್ತೇನೆ ಎಂದು ಇಬ್ಬರು ನಾಯಕರನ್ನು ಸದನದಲ್ಲಿ ನೆನೆಪಿಸಿಕೊಂಡರು.
ದೇವರಾಜ್ ಅರಸು ಮೆಡಿಕಲ್ ಕಾಲೇಜು ಈಗಿನ ಜಾಲಪ್ಪ ಮೆಡಿಕಲ್ ಕಾಲೇಜಿನ ಟ್ರಸ್ಟಿ“ನಾನು ಕೂಡಾ ದೇವರಾಜ್ ಅರಸು ಮೆಡಿಕಲ್ ಕಾಲೇಜು ಈಗಿನ ಜಾಲಪ್ಪ ಮೆಡಿಕಲ್ ಕಾಲೇಜಿನ ಟ್ರಸ್ಟಿಯಾಗಿದ್ದೆ. ಮೂರು ಬೋರ್ಡ್ ಮೀಟಿಂಗ್ ನಲ್ಲಿ ಕಾರಣಾಂತರದಿಂದ ನನಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸತತವಾಗಿ ಮೀಟಿಂಗ್‌ನಲ್ಲಿ ಭಾಗವಹಿಸದೇ ಇದ್ದಿದ್ದರಿಂದ ನಿನ್ನನ್ನು ಟ್ರಸ್ಟಿ ಸ್ಥಾನದಿಂದ ತೆಗೆದು ಹಾಕುತ್ತೇನೆ ಎಂದು ಆರ್.ಎಲ್.ಜಾಲಪ್ಪ ಹೇಳಿದ್ದರು. ಮೆಡಿಕಲ್ ಕಾಲೇಜಿನ ನಿಯಮದ ಪ್ರಕಾರ ನಡೆದುಕೊಳ್ಳಿ ಎಂದು ನಾನು ಹೇಳಿದ್ದೆ. ಈಗ ನನ್ನ ಮಗನನ್ನು ಮೀಟಿಂಗಿಗೆ ಕಾಲೇಜಿನವರು ಕರೆದಿದ್ದರು. ಅವನು ಒಂದು ಮೀಟಿಂಗ್ ನಲ್ಲಿ ಭಾಗವಹಿಸಿ ಬಂದಿದ್ದಾನೆ”ಎಂದು ಸಿದ್ದರಾಮಯ್ಯನವರು ಜಾಲಪ್ಪನವರನ್ನು ಸದನದಲ್ಲಿ ನೆನೆಪಿಸಿಕೊಂಡರು