ಶಿವಾಜಿ ಮಹಾರಾಜ್‍ರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಯಾವುದೇ ಒಂದು ಜಾತಿ, ಸಮಾಜ, ಪ್ರದೇಶಕ್ಕೆ ಸಿಮೀತ ಆದವರಲ್ಲ. ಇಬ್ಬರು ರಾಷ್ಟ್ರಪುರುಷರಿಗೆ ಆಗಿರುವ ಅಪಮಾನ ಇಡೀ ಹಿಂದೂಸ್ತಾನಕ್ಕೆ ಆಗಿರುವ ಅಪಮಾನ. ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಭಯ್ ಪಾಟೀಲ್ ಶಿವಾಜಿ ಮಹಾರಾಜರು ಒಂದು ಜಾತಿ, ಒಂದು ಸಮಾಜ, ಒಂದು ಪ್ರದೇಶಕ್ಕೆ ಸಂಬಂಧಿಸಿದವರಲ್ಲ. ಸಂಪೂರ್ಣ ಈ ದೇಶಕ್ಕೆ ಸಂಬಂಧಿಸಿದವರು. ಹೀಗಾಗಿ ಶಿವಾಜಿ ಮಹಾರಾಜರ ಪುತ್ಥಳಿಗೆ ಆಗಿರುವ ಅವಮಾನ ಇಡೀ ಹಿಂದೂಸ್ತಾನಕ್ಕೆ ಆಗಿರುವ ಅವಮಾನ. ಅದೇ ರೀತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಧೀರ ದೇಶಪ್ರೇಮಿ. ಹೀಗಾಗಿ ಅವರು ಒಂದು ಸಮಾಜ, ಜಾತಿ, ರಾಜ್ಯಕ್ಕೆ ಸಿಮೀತವಾದ ವ್ಯಕ್ತಿ ಅಲ್ಲ. ಅವರ ಆದರ್ಶ ಇಟ್ಟುಕೊಂಡು ಅನೇಕ ಮಹಾಪುರುಷರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದಂತವರು. ಈ ಇಬ್ಬರು ರಾಷ್ಟ್ರಪುರುಷರಿಗೆ ಆಗಿರುವ ಅಪಮಾನವನ್ನು ನಾನು ಖಂಡಿಸುತ್ತೇನೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್, ಚನ್ನಮ್ಮಾಜಿ, ಸಿಂಧೂರ ಲಕ್ಷ್ಮಣ ಅವರು ಸೇರಿದಂತೆ ಎಲ್ಲ ಮಹಾಪುರುಷರು ಅವರ ಕಾಲದಲ್ಲಿ ಯಾವುದೇ ಒಂದು ಜಾತಿ, ಭಾಷೆ, ಪ್ರದೇಶಕ್ಕೆ ಸಿಮೀತವಾಗಿ ಕೆಲಸ ಮಾಡಿದವರಲ್ಲ ಎಂಬ ಭಾವನೆಯನ್ನು ತಿಳಿದುಕೊಳ್ಳುವ ಕೆಲಸವನ್ನು ಸಮಾಜದ ಪ್ರತಿಯೊಬ್ಬರು ಮಾಡಬೇಕು. ಅಂದಾಗ ಮಾತ್ರ ಇಂತಹ ಘಟನೆಗಳು ನಡೆಯುವುದಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಸರ್ಕಾರ ತನಿಖೆ ಮಾಡಬೇಕು. ಇಂತಹ ಘಟನೆಗಳ ಹಿಂದೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾರಾದ್ರೂ ಇರಬಹುದು. ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡಬೇಕು. ಸೋಮವಾರ ಅಧಿವೇಶನದಲ್ಲಿ ಪೊಲೀಸ್ ಇಲಾಖೆ ವೈಫಲ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಅಭಯ್ ಪಾಟೀಲ್ ಸ್ಪಷ್ಟಪಡಿಸಿದರು.