Breaking News

ವಾರಣಾಸಿಯಿಂದ ಬರುತ್ತಲೇ ಮೂವರು ಸಚಿವರಿಗೆ ಸಿಎಂ ಫುಲ್ ಕ್ಲಾಸ್

Spread the love

ಬೆಳಗಾವಿ, ಡಿ 16: 25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗುವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಾರಣಾಸಿಯಲ್ಲಿ ಪಕ್ಷ ಆಯೋಜಿಸಿದ್ದ ಧಾರ್ಮಿಕ ಯಾತ್ರೆ ಮತ್ತು ಬಿಜೆಪಿ ಸಿಎಂಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಹನ್ನೊಂದು, ಜೆಡಿಎಸ್ ಎರಡು ಮತ್ತು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಇದರಲ್ಲಿ, ಪಕ್ಷಕ್ಕೆ ತೀವ್ರ ಮುಜುಗರ ತಂದಿದ್ದು ಬೆಳಗಾವಿಯಲ್ಲಿನ ಸೋಲು. ಅಯೋಧ್ಯೆಯಲ್ಲಿ ರಾಮ ಮಂದಿರ ದರ್ಶನದ ವೇಳೆ ಬಿಜೆಪಿ ವರಿಷ್ಠ ಜೆ.ಪಿ.ನಡ್ಡಾ ಕೂಡಾ ಸಿಎಂ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು.

 

ತಮ್ಮ ಸ್ವಕ್ಷೇತ್ರ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿನ ವಿಧಾನಸಭಾ ಉಪ ಚುನಾವಣೆಯ ಸೋಲು ಮತ್ತು ಪಕ್ಷದ ಭದ್ರಕೋಟೆ ಬೆಳಗಾವಿಯಲ್ಲಿನ ಪರಿಷತ್ ಚುನಾವಣೆಯಲ್ಲಿನ ಸೋಲಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವರಿಷ್ಠರ ಮುಂದೆ ಮುಜುಗರದ ಪರಿಸ್ಥಿತಿ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.

ಬೆಳಗಾವಿ ವ್ಯಾಪ್ತಿಯ ಪಕ್ಷದ ನಾಯಕರು ಸಂಘಟಿತ ಪ್ರಯತ್ನ ನಡೆಸಿಲ್ಲ ಎನ್ನುವ ಸಿಟ್ಟಿನಿಂದಲೇ ವಾರಣಾಸಿಯಿಂದ ಸದನದಲ್ಲಿ ಭಾಗವಹಿಸಲು ಆಗಮಿಸಿದ ಸಿಎಂ ಬೊಮ್ಮಾಯಿ, ಮೂವರು ಸಚಿವರನ್ನು ಕಂಡ ಕೂಡಲೇ ಸಿಟ್ಟಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವೇಳೆ, ಮೂವರು ಸಚಿವರು ತಲೆ ಎತ್ತಲಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಗೆಲುವುಬೆಳಗಾವಿಯಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಿದ್ದರೂ, ಅದೇ ಸಮುದಾಯದ ಮಹಾಂತೇಶ್ ಕವಟಗಿಮಠ ಸೋಲು ಅನುಭವಿಸಿದ್ದರು. ಕಾಂಗ್ರೆಸ್‌ನ ಚನ್ನರಾಜ ಬಸವರಾಜ ಹಟ್ಟಿಹೊಳಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದರು. ಇದು ಪಕ್ಷಕ್ಕೆ ಮುಖಭಂಗ ಎದುರಾಗಿದ್ದು ಒಂದು ಕಡೆಯಾದರೆ, ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಹಾಗಿತ್ತು. ಈ ಸೋಲಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಮೂವರು ಸಚಿವರನ್ನು ಗುರಿಯಾಗಿಸಿದಂತೆ ಕಾಣುತ್ತಿದೆ.

 ಲಿಂಗಾಯತ ಸಮುದಾಯದ ನಾಯಕನನ್ನು ಗೆಲ್ಲಿಸಿಕೊಂಡು ಬರಲು ನಿಮಗೆ ಸಾಧ್ಯವಾಗಲಿಲ್ಲವೇ

ಲಿಂಗಾಯತ ಸಮುದಾಯದ ನಾಯಕನನ್ನು ಗೆಲ್ಲಿಸಿಕೊಂಡು ಬರಲು ನಿಮಗೆ ಸಾಧ್ಯವಾಗಲಿಲ್ಲವೇ, ವರಿಷ್ಠರಿಗೆ ಏನೆಂದು ಉತ್ತರಿಸಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವರಾದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಮತ್ತು ಉಮೇಶ್ ಕತ್ತಿಯವರನ್ನು ನೇರವಾಗಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಪ್ರಶ್ನೆಗೆ ಉತ್ತರಿಸಲಾಗದೇ ಮೂವರು ಸಚಿವರು ತಲೆತಗ್ಗಿಸಿದರು. ಸದನದಲ್ಲಿ ಭಾಗವಹಿಸಲು ಈ ಮೂವರು ಸಚಿವರು ಎದುರಾದಾಗ, ಸಿಎಂ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

 ಮೂವರು ಸಚಿವರೂ ಲಿಂಗಾಯತ ಸಮುದಾಯದವರು

ಮುಖ್ಯಮಂತ್ರಿ ಕ್ಲಾಸ್ ತೆಗೆದುಕೊಂಡ ಮೂವರು ಸಚಿವರೂ ಲಿಂಗಾಯತ ಸಮುದಾಯದವರು ಎನ್ನುವುದ ಒಂದು ಕಡೆ. ಇನ್ನೊಂದು ಕಡೆ, ಒಂದು ಲೋಕಸಭಾ ಸದಸ್ಯರು (ಮಂಗಲ ಅಂಗಡಿ), ಒಬ್ಬರು ರಾಜ್ಯಸಭಾ ಸದಸ್ಯರು (ಈರಣ್ಣ ಕಡಾಡಿ), ಹದಿಮೂರು ಜನ ಜಿಲ್ಲೆಯಿಂದ ಪ್ರತಿನಿಧಿಸುವ ಶಾಸಕರು ಬಿಜೆಪಿಯಲ್ಲಿ ಇದ್ದೂ ಪಕ್ಷದ ಅಭ್ಯರ್ಥಿ ಸೋತಿದ್ದು ಬಸವರಾಜ ಬೊಮ್ಮಾಯಿಯವರಿಗೆ ನುಂಗಲಾರದ ತುತ್ತಾಗಿದೆ.

 ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ತಮ್ಮ ಸಹೋದರನ ಜೊತೆಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ಕ್ಷೇತ್ರದಲ್ಲೇ ಬೀಡುಬಿಟ್ಟು ನೀವು ಮಾಡಿದ್ದಾದರೂ ಏನು ಎನ್ನುವ ಪ್ರಶ್ನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಸವದಿ, ಕತ್ತಿ ಮತ್ತು ಜೊಲ್ಲೆಯವರಿಗೆ ಖಾರವಾಗಿ ಕೇಳಿದ್ದಾರೆ ಎನ್ನುವ ಸುದ್ದಿಯಿದೆ. ಬೆಳಗಾವಿಯಲ್ಲಿ ಸೋಲಿಗೆ ವರಿಷ್ಠರು ಕೂಡಾ ವರದಿ ಕೊಡುವಂತೆ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸೂಚಿಸಿದ್ದಾರೆ ಎನ್ನುವ ಸುದ್ದಿಯಿದೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ