ಪಾಟ್ನಾ: ಕೊರೊನಾ ಮಹಾಮಾರಿ ಸೃಷ್ಟಿಸಿರುವ ಸಂದಿಗ್ಧ ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಕುಟುಂಬಗಳಿಗೆ ನಟ ಸೋನು ಸೂದ್ ನೆರವಾಗುತ್ತಿದ್ದಾರೆ. ಸದ್ಯ ಪ್ರವಾಹದಲ್ಲಿ ಕುಟುಂಬದ ಜೀವನಾಧಾರವಾಗಿದ್ದ 2 ಎಮ್ಮೆಗಳನ್ನು ಕಳೆದುಕೊಂಡ ಬಡ ಕುಟುಂಬದ ನೆರವಿಗೆ ಸೋನು ಸೂದ್ ಧವಿಸಿದ್ದಾರೆ.
ಬಿಹಾರದ ಚಂಪರನ್ ಪ್ರದೇಶದ ಭೋಲಾ ಗ್ರಾಮದ ಕುಟುಂಬ ಭೀಕರ ಪ್ರವಾಹದಲ್ಲಿ ಪುತ್ರ ಹಾಗೂ ಜೀವನಾಧರವಾಗಿದ್ದ ಎಮ್ಮೆಯನ್ನು ಕಳೆದುಕೊಂಡಿತ್ತು. ಈ ಕುರಿತ ಮಾಹಿತಿ ಪಡೆದ ಸೋನು ಸೂದ್ ಮತ್ತೊಂದು ಎಮ್ಮೆಯನ್ನು ಖರೀದಿ ಮಾಡಿ ಕುಟುಂಬಕ್ಕೆ ತಲುಪಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಶೇರ್ ಮಾಡಿರುವ ಸೋನು ಸೂದ್, ಇವರಿಗಾಗಿ ಎಮ್ಮೆಯನ್ನು ಖರೀದಿ ಮಾಡಿದ ಸಂದರ್ಭದಲ್ಲಿ ಉಂಟಾದ ಸಂತಸ ನನ್ನ ಮೊದಲ ಕಾರು ಖರೀದಿ ಮಾಡಿದ ವೇಳೆಯೂ ಆಗಿರಲಿಲ್ಲ. ನಾನು ಬಿಹಾರಕ್ಕೆ ಭೇಟಿ ನೀಡಿದ ವೇಳೆ ಈ ಎಮ್ಮೆಯ ತಾಜಾ ಹಾಲನ್ನು ಕೂಡಿಯುತ್ತೇನೆ ಎಂದು ಬರೆದುಕೊಂಡಿದ್ದಾರೆ
ಮತ್ತೊಂದು ಟ್ವೀಟ್‍ನಲ್ಲಿ, ಕ್ವಾರಂಟೈನ್ ನಿಯಮಗಳಿಂದ ಹೋಟೆಲ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದರು. ಕೊರೊನಾ ನೆಗೆಟಿವ್ ವರದಿ ಬಂದ ಬಳಿಕವೂ ಮೂರು ವರ್ಷದ ಪುತ್ರಿಯೊಂದಿಗೆ ಹೋಟೆಲ್ ಕ್ವಾರಂಟೈನ್‍ನಲ್ಲೇ ಉಳಿದಿದ್ದೇವೆ. ಕೊರೊನಾ ಪಾಸಿಟಿವ್ ಬಂದಿದ್ದ ಪತ್ನಿ 60 ದಿನಗಳ ಮಗುವಿನೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಮಗು ತಾಯಿಯ ನೆನಪಿನಲ್ಲಿ ಊಟ ಕೂಡ ಮಾಡುತ್ತಿಲ್ಲ. ಮನೆಗೆ ತೆರಳಲು ಸಹಾಯ ಮಾಡಿ ಎಂದು ಮಧ್ಯ ಪ್ರದೇಶದ ಸರ್ಕಾರದ ನೆರವು ಕೋರಿದ್ದ ಹರೀಶ್ ಅವರಿಗೆ ಸೋನು ಸೂದ್ ನೆರವು ನೀಡುವ ಭರವಸೆ ನೀಡಿ, ಲಗೇಜ್ ಪ್ಯಾಕ್ ಮಾಡಿಕೊಳ್ಳಲು ಹೇಳಿದ್ದರು.
ಘಟನೆ ನಡೆದ ಒಂದು ಗಂಟೆ ಅವಧಿಯಲ್ಲೇ ಸೋನು ಸೂದ್, ಹರೀಸ್ ಅವರನ್ನು ಮನೆಗೆ ಕಳುಹಿಸಿದ್ದರು. ಸೋನು ಸೂದ್ ಅವರ ಟ್ವಿಟ್ಟರ್ ಖಾತೆಯಲ್ಲಿ ಘಟನೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇಂತಹ ಸಾಕಷ್ಟು ಘಟನೆಗಳು ಅವರ ಟ್ವಿಟ್ಟರ್ ಖಾತೆ ಪರಿಶೀಲಿಸಿದ ವೇಳೆ ಕಾಣಿಸುತ್ತಿದ್ದು, ಸಹಾಯ ಪಡೆದ ಹಲವರು ಸೋನು ಸೂದ್ ಅವರನ್ನು ನೀವು ದೇವರು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ಸೋನು ಸೂದ್ ಮಾತ್ರ ತಮ್ಮ ನೆರವಿನ ಹಸ್ತವನ್ನು ಮತ್ತಷ್ಟು ಮಂದಿಗೆ ಚಾಚುತ್ತಿದ್ದಾರೆ.