ಬಾಗಲಕೋಟೆ: ನನ್ನ ಪರವಾಗಿ ಬನ್ನಿ, ಘೋಷಣೆ ಕೂಗಿ ಅಂತಾ ಯಾರನ್ನೂ ಕರೆದಿಲ್ಲ. ಮುಂದೆಯೂ ಕರೆಯುವುದಿಲ್ಲ ಎಂದು ಬಾದಾಮಿ ಕ್ಷೇತ್ರದ ಶಾಸಕ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶುಕ್ರವಾರ ವಿಶೇಷ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಆಗಮಿಸಿದ್ದ ಅವರು, ನೇರವಾಗಿ ಪುರಸಭೆಯಲ್ಲಿರುವ ಮತಗಟ್ಟೆಗೆ ಭೇಟಿ ನೀಡಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲವಿದೆ. ಈಗಲೇ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳುವುದು ಅಪ್ರಸ್ತುತ. ಸ್ಪರ್ಧೆ ಮಾಡುವ ಬಗ್ಗೆ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ರಾಜ್ಯದಲ್ಲಿ 10 ರಿಂದ 15 ಕಡೆ ನಿಂತುಕೊಳ್ಳಿ ಅಂತಾ ಕರೆಯುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ 2 ತಿಂಗಳು ಇದ್ದಾಗ ನಿರ್ಧಾರ ಮಾಡುತ್ತೇನೆ. ನಾನು ಈಗ ಬಾದಾಮಿ ಶಾಸಕ, 2023 ರವರೆಗೂ ಶಾಸಕನಾಗಿ ಇರುತ್ತೇನೆ, ಆಮೇಲೆ ನೋಡೋಣ ಅಂದ್ರು.