ಬೆಳಗಾವಿ: ಜಿಲ್ಲೆಯಲ್ಲಿ ಡಿಸೆಂಬರ್ 13 ರಂದು ನಡೆಯುತ್ತಿರುವ ಅಧಿವೇಶನಕ್ಕೆ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಜಿಲ್ಲಾಡಳಿತ ಪ್ರತಿಯೊಬ್ಬರಿಗೂ 72 ಗಂಟೆ ಒಳಗೆ ಟೆಸ್ಟ್ ಮಾಡಿಸಿದ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ. ಅಲ್ಲದೇ ಎರಡು ಡೋಸ್ ವ್ಯಾಕ್ಸಿನ್ ಮತ್ತು ನೆಗೆಟಿವ್ ವರದಿ ಇದ್ದರೆ ಮಾತ್ರ ಅಧಿವೇಶನಕ್ಕೆ ಅನುಮತಿ ಎಂದು ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ. ಇನ್ನು ಅಧಿವೇಶನದ ಬಂದೋಬಸ್ತ್ ಮತ್ತು ಭದ್ರತೆಗೆ ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿದೆ. ಓರ್ವ ನಗರ ಪೊಲೀಸ್ ಆಯುಕ್ತ, ಇಬ್ಬರು ಡಿಸಿಪಿ, 15 ಜನ ಎಸ್‌ಪಿ, 35 ಡಿವೈಎಸ್‌ಪಿ, 100 ಸಿಪಿಐ, 250 ಪಿಎಸ್ಐ, ಹೋಮ್ ಗಾರ್ಡ್‌ಗಳು ಸೇರಿ ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ವಾಸ್ತವ್ಯಕ್ಕೆ ಜರ್ಮನ್ ಮಾದರಿಯ ಟೌನ್ ಶಿಪ್ ನಿರ್ಮಾಣ ಮಾಡಲಾಗಿದೆ. ಮೂರು ಟೆಂಟ್‌ಗಳಲ್ಲಿ 1800 ಜನ ಸಿಬ್ಬಂದಿಗೆ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಪುರುಷ ಪೇದೆ ಹಾಗೂ ಪಿಎಸ್‌ಐಗಳಿಗೆ ಈ ಟೌನ್ ಶಿಪ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಂಬ್ರಾದ ಏರ್ಮನ್ ಟ್ರೈನಿಂಗ್ ಸ್ಕೂಲ್ನಲ್ಲಿ 500 ಜನ, ಮರಾಠ ರೆಜಿಮೆಂಟ್ನಲ್ಲಿ 400 ಜನ ಪೇದೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಮಚ್ಚೆಯಲ್ಲಿರುವ ಕೆಎಸ್‌ಆರ್‌ಪಿಯಲ್ಲಿ 500 ಜನ ಪೊಲೀಸರ ವಾಸ್ತವ್ಯಕ್ಕೆ ಅನುವು ಮಾಡಲಾಗಿದ್ದು, ಪಿಟಿಎಸ್ ಕಂಗ್ರಾಳಿಯಲ್ಲಿ 400 ಜನ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.