ಶ್ರೀನಗರ: ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನ ಕೊರೊನಾ ಸೋಂಕಿತರನ್ನ ಭಾರತಕ್ಕೆ ರಹಸ್ಯವಾಗಿ ಕಳಿಸ್ತಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಶನಿವಾರ ಸೈನಿಕರ ಗುಂಡಿಗೆ ಬಲಿಯಾದ ಇಬ್ಬರು ಉಗ್ರರಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ.
ಇಬ್ಬರು ಉಗ್ರರು ಸಾವನ್ನಪ್ಪಿದ ಬಳಿಕ ಮೃತದೇಹಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಇಬ್ಬರು ಕೊರೊನಾ ಸೋಂಕಿತರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿತರನ್ನು ಭಾರತದೊಳಗೆ ಕಳಿಸಲು ಪಾಕ್ ಪ್ರಯತ್ನಿಸುತ್ತಿದೆ ಅನ್ನೋ ಅನುಮಾನಗಳು ದಟ್ಟವಾಗುತ್ತಿವೆ.
ಈ ಕುರಿತು ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರ ಪೊಲೀಸರು, ದಕ್ಷಿಣ ಕಾಶ್ಮೀರದ ಕುಲ್‍ಗಾಮ್ ಮತ್ತು ಆರಾ ಗ್ರಾಮದ ಬಳಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೃತದೇಹಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲಗಾಮ್ ಮತ್ತು ಆರಾ ಗ್ರಾಮದ ವ್ಯಾಪ್ತಿಯಲ್ಲಿ ಇಬ್ಬರು ಅಡಗಿರೋ ವಿಷಯ ಸೇನೆಗೆ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿದ್ದ ಸೇನಾ ಅಧಿಕಾರಿಗಳು ಇಬ್ಬರಿಗೂ ಶರಣಾಗುವಂತೆ ಹೇಳಿದ್ದರು. ಆದ್ರೆ ಇಬ್ಬರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಇತ್ತ ಪ್ರತ್ಯುತ್ತರವಾಗಿ ಸೇನೆ ಉತ್ತರ ನೀಡಿದೆ. ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರನ್ನು ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು.
ಸಾವನ್ನಪ್ಪಿದ ಓರ್ವನ ಹೆಸರು ಅಲಿ ಹೈದರ್ ಎಂದು ತಿಳಿದು ಬಂದಿದ್ದು, ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಮೃತರಿಬ್ಬರು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿದವರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಸೈನಿಕರೊಬ್ಬರು ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.