Breaking News

ಪರಿಷತ್ ಚುನಾವಣೆ ಕ್ಷೇತ್ರ ಸಮೀಕ್ಷೆ: ಎಸ್‌ ರವಿ ಹ್ಯಾಟ್ರಿಕ್‌ ಗೆಲುವಿಗೆ ಲಗಾಮು?

Spread the love

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಮೂರನೇ ಜಯದ ವಿಶ್ವಾಸದಲ್ಲಿದ್ದಾರೆ. ಗೆಲುವಿನ ಓಟಕ್ಕೆ ಜೆಡಿಎಸ್ ಇಲ್ಲವೇ ಬಿಜೆಪಿ ತಡೆಯೊಡ್ಡುವುದೇ ಎಂಬುದು ಸದ್ಯದ ಕುತೂಹಲ.

ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಇದರ ವ್ಯಾಪ್ತಿಗೆ ಬರುತ್ತವೆ.

ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ಕ್ಷೇತ್ರವಿದು. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಾಮಬಲ ಕೈ ಪಾಳಯದ ಬಲ ಹೆಚ್ಚಿಸಿದೆ.

ಕ್ಷೇತ್ರ ವ್ಯಾಪ್ತಿಯ ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಎಚ್‌.ಡಿ.ಕುಮಾರಸ್ವಾಮಿ ಸೇರಿ ಐವರು ಜೆಡಿಎಸ್‌ ಶಾಸಕರು ಇರುವುದು ಆ ಪಕ್ಷದ ವಿಶ್ವಾಸ ಹೆಚ್ಚಿಸಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಈ ನಡುವೆ ಕಾಂಗ್ರೆಸ್‌ ನಾಯಕರು, ಜೆಡಿಎಸ್‌-ಬಿಜೆಪಿ ನಡುವೆ ಒಳ ಒಪ್ಪಂದದ ಆರೋಪ ತೇಲಿಬಿಟ್ಟಿದ್ದಾರೆ.

ಕಳೆದ ಚುನಾವಣೆ ಫಲಿತಾಂಶವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದ್ದು, ನಾಯಕರೆಲ್ಲ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆದ ಹಾಲಿ ಸದಸ್ಯ ಎಸ್‌.ರವಿ ಕಳೆದ ಒಂದು ವರ್ಷದಿಂದ ಚುನಾವಣೆ ಸಿದ್ಧತೆ ನಡೆಸಿದ್ದು, ಮತದಾರರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ರಮೇಶ್‌ ಗೌಡರಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ನಾಮಬಲವೇ ಶ್ರೀರಕ್ಷೆ. ಎರಡೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಭದ್ರ ನೆಲೆ ಇದೆ. ಎಚ್‌ಡಿಕೆ ಬಗೆಗಿನ ಅಭಿಮಾನ ಮತಗಳಾಗಿ ಪರಿವರ್ತನೆ ಆಗಲಿದೆ ಎನ್ನುವ ವಿಶ್ವಾಸದಲ್ಲಿರುವ ರಮೇಶ್‌, ಅವರ ನೆರಳಿನಲ್ಲೇ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಹೊರಗಿನವರು ಎಂಬುದು ಕಾಂಗ್ರೆಸ್ ಆರೋಪ.

ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಯಾಗಿ ಕಣದಲ್ಲಿರುವ ಬಿ.ಸಿ. ನಾರಾಯಣಸ್ವಾಮಿ ಅವರೂ ರಾಜಕೀಯದಲ್ಲಿ ಅನುಭವ ಹೊಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಹಿಂದಿದ್ದಾಗ್ಯೂ ಚನ್ನಪಟ್ಟಣ, ಹೊಸಕೋಟೆ, ದೊಡ್ಡಬಳ್ಳಾಪುರ ಮೊದಲಾದ ಕಡೆಗಳಲ್ಲಿ ಪಕ್ಷ ಬೆಂಬಲಿತರು ಇದ್ದಾರೆ. ಜೊತೆಗೆ ಕೇಂದ್ರ ಹಾಗೂ ರಾಜ್ಯದಲ್ಲೂ ಪಕ್ಷದ ಸರ್ಕಾರವಿದ್ದು, ಅಭಿವೃದ್ಧಿಗಾಗಿ ಮತದಾರರು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ಅವರದ್ದು.

ಮತದಾರರಲ್ಲಿ ಶೇ 90 ಮಂದಿ ಗ್ರಾಮ ಪಂಚಾಯಿತಿಗಳ ಸದಸ್ಯರು. ಕಾಂಗ್ರೆಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವುದು ಕೈ ಪಾಳಯದ ವಿಶ್ವಾಸ ಹೆಚ್ಚಿಸಿದೆ. ಜೆಡಿಎಸ್‌ ಬೆಂಬಲಿತರೂ ಗಣನೀಯ ಸಂಖ್ಯೆಯಲ್ಲಿದ್ದು ಎದಿರೇಟು ನೀಡುವ ಉತ್ಸಾಹದಲ್ಲಿದ್ದಾರೆ. ಸದ್ಯ ಅಸ್ತಿತ್ವದಲ್ಲಿರುವ ಎಂಟು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ತಲಾ ಎರಡರಲ್ಲಿ ಕಾಂಗ್ರೆಸ್‌, ಜೆಡಿಎಸ್ ಮತ್ತು ಒಂದು ಕಡೆ ಬಿಜೆಪಿ ಸ್ವಂತಬಲದಿಂದ ಅಧಿಕಾರದಲ್ಲಿದೆ. ಎರಡು ಕಡೆ ಜೆಡಿಎಸ್-ಬಿಜೆಪಿ, ಒಂದು ಕಡೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಆಡಳಿತ ನಡೆಸುತ್ತಿವೆ.

ಜೆಡಿಎಸ್ ಅಭ್ಯರ್ಥಿಗೆ ಕ್ಷೇತ್ರದ ಪರಿಚಯವೇ ಇಲ್ಲ. ಗ್ರಾ.ಪಂ.ಗಳಲ್ಲಿ ಅತಿ ಹೆಚ್ಚು ಮಂದಿ ಕಾಂಗ್ರೆಸ್ ಬೆಂಬಲಿತರಿದ್ದು, ಹಿಂದಿಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇವೆ.

– ಎಸ್‌. ರವಿ, ಕಾಂಗ್ರೆಸ್ ಅಭ್ಯರ್ಥಿ

ಇಲ್ಲಿನ 8 ಶಾಸಕರ ಪೈಕಿ ಐವರು ನಮ್ಮವರೇ ಆಗಿರುವುದು ಬಲ ಹೆಚ್ಚಿಸಿದೆ. ಗ್ರಾಮ ಪಂಚಾಯಿತಿಗಳ ಮತದಾರರು ಜೆಡಿಎಸ್‌ ಬಗ್ಗೆ ಒಲವು ಹೊಂದಿದ್ದು, ಪಕ್ಷವನ್ನು ಬೆಂಬಲಿಸಲಿದ್ದಾರೆ.

– ಎಚ್.ಎಂ. ರಮೇಶ್‌ ಗೌಡ, ಜೆಡಿಎಸ್‌ ಅಭ್ಯರ್ಥಿ

ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರು ಕಡಿಮೆ ಇರಬಹುದು. ಆದರೆ ಕೇಂದ್ರ, ರಾಜ್ಯದಲ್ಲಿ ಪಕ್ಷದ ಸರ್ಕಾರವಿದೆ. ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಮತ ಚಲಾಯಿಸುತ್ತಾರೆ.

– ಬಿ.ಸಿ. ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ

ಎಲ್ಲಿ ಯಾರಿಗೆ ಅಧಿಕಾರ?

ರಾಮನಗರ ನಗರಸಭೆ – ಕಾಂಗ್ರೆಸ್‌
ಕನಕಪುರ ನಗರಸಭೆ – ಕಾಂಗ್ರೆಸ್‌
ಚನ್ನಪಟ್ಟಣ ನಗರಸಭೆ – ಜೆಡಿಎಸ್‌
ಮಾಗಡಿ ಪುರಸಭೆ – ಬಿಜೆಪಿ-ಜೆಡಿಎಸ್‌
ದೊಡ್ಡಬಳ್ಳಾಪುರ ನಗರಸಭೆ – ಬಿಜೆಪಿ-ಜೆಡಿಎಸ್‌
ದೇವನಹಳ್ಳಿ ಪುರಸಭೆ – ಕಾಂಗ್ರೆಸ್‌-ಜೆಡಿಎಸ್‌
ಹೊಸಕೋಟೆ ನಗರಸಭೆ – ಬಿಜೆಪಿ
ವಿಜಯಪುರ ಪುರಸಭೆ – ಜೆಡಿಎಸ್‌


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ