ಖಾನಾಪುರ ಅಭಿವೃದ್ಧಿಗೆ ಸ್ಪಂದಿಸದ ರಾಜ್ಯ ಸರಕಾರದ ವಿರುದ್ದ ಸುವರ್ಣ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಳಗಾವಿಯ ಅಧಿವೇಶನ ಹಿನ್ನೆಲೆ ಈ ಭಾಗದ ರೈತರು, ಸಾರ್ವಜನಿಕರು ಸೇರಿ ಹೆಸರಲ್ಲಿ ಡಿ. 12ರಂದು ಖಾನಾಪುರ ಸಂಘರ್ಷ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಹಿತಿ ನೀಡಿದ್ದಾರೆ.
ಖಾನಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 13ರಿಂದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಖಾನಾಪುರ ತಾಲೂಕಿನ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ ಮಾಡಲು ನಿರ್ಧರಿಸಿದ್ದೇವೆ. ಈ ಪಾದಯಾತ್ರೆಯು ಡಿಸೆಂಬರ್ 12ರಂದು ಮಧ್ಯಾಹ್ನ 3 ಗಂಟೆಗೆ ಖಾನಾಪೂರದಿಂದ ಆರಂಭವಾಗಲಿದೆ. ಖಾನಾಪುರದಿಂದ ಬೆಳಗಾವಿಯ ಸುವರ್ಣ ಸೌಧವರೆಗೆ 40 ಕಿಮೀ ಪಾದಯಾತ್ರೆ ಮಾಡಲಿದ್ದೇವೆ. ಡಿ.13ರ ಬೆಳಗ್ಗೆ 10ಕ್ಕೆ ಸುವರ್ಣ ಸೌಧ ತಲುಪುತ್ತೇವೆ. ಸರ್ಕಾರದ ಗಮನ ಸೆಳೆಯಲು ಈ ಪ್ರಯತ್ನ ಮಾಡುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಿವಿ, ಕಣ್ಣು ಇಲ್ಲ. ಹೀಗಾಗಿ ಖಾನಾಪುರ ತಾಲೂಕಿನ ಜನರೆಲ್ಲರೂ ಸೇರಿ ಅಭಿವೃದ್ಧಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಗಡಿ ತಾಲೂಕಿನ ಯುವಕರು, ರೈತರು, ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಕೊನೆಯ ತಾಲೂಕಿನ ಮೇಲೆ ನಿಮ್ಮ ಕಣ್ಣು ಬೀಳಲಿ ಎಂದು ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಬೆಳಗಾವಿ ಜಿಲ್ಲೆಯ ಕೊನೆಯ ತಾಲೂಕು ಖಾನಾಪುರದ ಕಡೆ ಯಾರು ಕೂಡ ಕಣ್ಣೆತ್ತಿ ನೋಡುತ್ತಿಲ್ಲ. ಇನ್ನು ನಮ್ಮ ಎಂಪಿಯವರು ಅವರು ಕಣ್ಣು ಮುಚ್ಚಿಕೊಂಡು ಗೆದ್ದು ಬಂದಿರುವ ಅನಂತಕುಮಾರ್ ಹೆಗಡೆ ಅವರು ಆ ಪುಣ್ಯಾತ್ಮ ಇಲ್ಲಿ ಭೇಟಿ ಕೊಟ್ಟಿಲ್ಲ. ಹೀಗಾಗಿ ಖಾನಾಪುರ ಅಭಿವೃದ್ಧಿಗೋಸ್ಕರ ಸುವರ್ಣಸೌಧ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಅನಂತಕುಮಾರ್ ಹೆಗಡೆ ವಿರುದ್ಧ ಅಂಜಲಿ ನಿಂಬಾಳ್ಕರ್ ಕಿಡಿಕಾರಿದರು.
ಒಟ್ಟಿನಲ್ಲಿ ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯ ಅಂಜಲಿ ನಿಂಬಾಳ್ಕರ್ ನಿರ್ಧರಿಸಿರುವ ಪಾದಯಾತ್ರೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತಾ ಎಂದು ಕಾದು ನೋಡಬೇಕಿದೆ.