ಬೀದರ್ : ಕಾಂಗ್ರೆಸ್ ಪಕ್ಷಕ್ಕೆ ಈಗ ವಯಸ್ಸಾಗಿದೆ. ಸ್ವಾತಂತ್ರ್ಯ ಹೋರಾಟದ ನಂತರ ಕಾಂಗ್ರೆಸ್ ಪಕ್ಷ ವಿಸರ್ಜನೆ ಆಗಬೇಕೆಂಬುದು ಗಾಂಧೀಜಿ ಅವರ ಆಶಯವಾಗಿತ್ತು. ಆದರೆ, ಈಗ ದೇಶದ ಜನರೇ ಆ ಪಕ್ಷವನ್ನು ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ರವಿವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಗ್ರಾಮ ಪಂಚಾಯತ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಮೂಲ ಪಕ್ಷವೇ ತೃಣಮೂಲ ಕಾಂಗ್ರೆಸ್. ಇಂದು ಆ ಪಕ್ಷದ ನಾಯಕತ್ವವನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿದೆ. ಹಾಗಾಗಿ ಜನರಲ್ಲಿ ಕೈ ಪಾರ್ಟಿ ಬಗ್ಗೆ ವಿಶ್ವಾಸ ಮೂಡಲು ಹೇಗೆ ಸಾಧ್ಯವೇ ಇಲ್ಲ. ಆದರೂ ಚುನಾವಣೆಗಳಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಛೇಡಿಸಿದರು.
ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಹತಾಶರಾಗಿ, ಇಲ್ಲ ಸಲ್ಲದ ಆರೋಪ ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರ ಇದ್ದಾಗ ಜನರ ಸೇವೆ ಮಾಡಬೇಕು, ಇಲ್ಲದಿದ್ದಾಗ ಅವರ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ಸಿಗರು ಈ ಎರಡನ್ನು ಮಾಡಲಿಲ್ಲ. ಬಿಜೆಪಿ ಸರ್ಕಾರದ ದೃಷ್ಟಿ ಮತ್ತು ಗುರಿ ಸ್ಪಷ್ಟವಾಗಿದ್ದು, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಬದ್ಧತೆಯೊಂದಿಗೆ ಅಧಿಕಾರ ನಡೆಸುತ್ತಿದ್ದೇವೆ ಎಂದು ಹೇಳಿದರು.