Breaking News

ಸಂಪುಟದ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹೊಸಬರ ಸೇರ್ಪಡೆ: ಯತ್ನಾಳ ಹೇಳಿಕೆ

Spread the love

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿನ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹೊಸಬರನ್ನು ತೆಗೆದುಕೊಳ್ಳಲಾಗುವುದು ಎಂಬುದಾಗಿ ಬಿಜೆಪಿ ಶಾಸಕ ಬಸನಗೌಡ ‍ಪಾಟೀಲ ಯತ್ನಾಳ ಅವರ ಹೇಳಿಕೆ ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.

 

ಡಿಸೆಂಬರ್‌ 10 ರ ಬಳಿಕ ಸಂಪುಟ ಪುನರ್‌ರಚನೆ ಆಗಲಿದೆ ಎಂದು ಯತ್ನಾಳ ಗುರುವಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಹೇಳಿದ್ದರು. ಆದರೆ, ಬಿಜೆಪಿಯಲ್ಲಿನ ಉನ್ನತ ಮೂಲಗಳ ಪ್ರಕಾರ, ತಕ್ಷಣಕ್ಕೆ ಯಾವುದೇ ಬದಲಾವಣೆಗಳು ಇಲ್ಲ. ಜನವರಿ ಬಳಿಕ ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆ ಬಗ್ಗೆ ವಿಸ್ತೃತ ಚರ್ಚೆಗಳು ಆಗಿಲ್ಲ.

ಸಂಪುಟದ ಎಲ್ಲ ಸಚಿವರ ಕಾರ್ಯ ವೈಖರಿಯ ಬಗ್ಗೆ ವರಿಷ್ಠರು ಮಾಹಿತಿ ಪಡೆದಿದ್ದಾರೆ. ಕೆಲವು ಸಚಿವರು ವಿಧಾನಸೌಧಕ್ಕೇ ಬರುವುದಿಲ್ಲ. ಶಾಸಕರ ಮೊಬೈಲ್‌ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸಂಪುಟ ಪುನರ್‌ರಚನೆ ಮಾಡುವುದು ಸೂಕ್ತ ಎಂದು ಯತ್ನಾಳ ಸಲಹೆ ನೀಡಿದರು.

ಕೆಲವು ಸಚಿವರು ತಮ್ಮ ಕೆಲಸ ಮಾಡುವುದು ಬಿಟ್ಟು ಮುಖ್ಯಮಂತ್ರಿಯವರ ಬಾಲಂಗೋಚಿಯಂತೆ ಓಡಾಡಿಕೊಂಡಿರುತ್ತಾರೆ. ಮುಖ್ಯಮಂತ್ರಿ ಅವರಿಗೆ ಅವರ ಕೆಲಸ ಮಾಡಲು ಬಿಡಲಿ. ಕೆಲವು ಸಚಿವರು ಜಿಲ್ಲೆಗಳಲ್ಲಿ ಕೆಲಸ ಮಾಡುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಮೂಲ ಮತ್ತು ವಲಸಿಗ ಸಚಿವರಲ್ಲಿ ನಿಷ್ಕ್ರಿಯರಾದವರನ್ನು ಕೈಬಿಡಬಹುದು ಎಂದು ಯತ್ನಾಳ ಹೇಳಿದರು.

ಈ ಕುರಿತು ಪ್ರಜಾವಾಣಿ ಜತೆ ಮಾತನಾಡಿದ ಸಚಿವರೊಬ್ಬರು, ಈ ರೀತಿ ದಿಢೀರ್‌ ಬದಲಾವಣೆ ಬಗ್ಗೆ ಯಾವುದೇ ಸೂಚನೆಗಳು ಇಲ್ಲ. ಯತ್ನಾಳ್‌ ಅವರಿಗೆ ಈ ರೀತಿ ಮಾತನಾಡುವುದು ಖಯಾಲಿ ಆಗಿದೆ. ವಿಧಾನಪರಿಷತ್‌ ಚುನಾವಣೆ ಮುಗಿಯುತ್ತಿದ್ದಂತೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಆ ಬಳಿಕ ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಬಿಬಿಎಂಪಿ ಚುನಾವಣೆಯೂ ಇದೆ. ಆ ಬಗ್ಗೆ ಪಕ್ಷ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದರು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ