ಚಿಕ್ಕಮಗಳೂರು: ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ವೃದ್ಧೆಯೊಬ್ಬರು ಭಿಕ್ಷೆ ಬೇಡಿ ಉಳಿಸಿದ್ದ ಒಂದು ಲಕ್ಷ ರೂಪಾಯಿಯನ್ನು ದೇವಸ್ಥಾನದ ಅನ್ನದಾನಕ್ಕಾಗಿ ಕೊಟ್ಟು ರಾಜ್ಯದ ಗಮನ ಸೆಳೆದಿದ್ದರು ಅದೇ ರೀತಿ ಮತ್ತೊಬ್ಬ ವೃದ್ಧೆ ದೇವರಿಗೇ ಧನಸಹಾಯ ಮಾಡಿದ್ದಾರೆ.
ಅಂದರೆ ಆಂಜನೇಯ ಸ್ವಾಮಿಯ ಬೆಳ್ಳಿ ಮುಖವಾಡಕ್ಕಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ದೇವಸ್ಥಾನಕ್ಕೆ ಈ ಅಜ್ಜಿ ಹಣ ನೀಡಿದ್ದಾರೆ. ಕೆಂಪಜ್ಜಿ ಎಂಬ ಈಕೆ ಭಿಕ್ಷೆ ಬೇಡಿ ದೇವತಾ ಕಾರ್ಯಕ್ಕೆ 10 ಸಾವಿರ ರೂಪಾಯಿ ನೀಡಿದ್ದರು. ಈ ಹಿಂದೆ ಅಂದರೆ 2019ರಲ್ಲೂ ಇದೇ ಅಜ್ಜಿ ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದರು.
ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಅಶ್ವತ್ಥಮ್ಮ ಎಂಬವರು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನಕ್ಕಾಗಿ ಒಂದು ಲಕ್ಷ ರೂಪಾಯಿ ನೀಡಿದ್ದರು. ಇಷ್ಟೊಂದು ಮೊತ್ತವನ್ನು ಅವರು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು ಉಳಿಸಿಟ್ಟ ಹಣವನ್ನು ಒಟ್ಟುಗೂಡಿಸಿ ನೀಡಿದ್ದರು ಎಂಬುದು ವಿಶೇಷ.