Breaking News

ಇಂದಿನಿಂದಲೇ ಮಳೆಹಾನಿ ಸಂತ್ರಸ್ಥರ ಖಾತೆಗೆ RTGS ಮೂಲಕ ಪರಿಹಾರ ಜಮಾ: ಜಿಲ್ಲಾಧಿಕಾರಿ ಆದೇಶ

Spread the love

ಧಾರವಾಡ: ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಹಾಗೂ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ತಕ್ಷಣಕ್ಕೆ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು 14 ಕೋಟಿ, 74 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ.

 

ನ.24 ರಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಲು ಕ್ರಮವಹಿಸಬೇಕೆಂದು ಎಲ್ಲ ತಹಶಿಲ್ದಾರರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಅವರು ನಿನ್ನೆ ಸಂಜೆ ಜಿಲ್ಲಾ ಪಂಚಾಯತ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕಾ ಪಂಚಾಯತ ಇಓಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ(ವೆಬೆಕ್ಸ್ ಮಿಟಿಂಗ್) ನಡೆಸಿ ಮಾತನಾಡಿದರು.

ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಗೆ 14 ಕೋಟಿ 74 ಲಕ್ಷ ರೂ.ಗಳನ್ನು ಮನೆ ಹಾನಿ ಪರಿಹಾರ ವಿತರಣೆಗಾಗಿ ಮಂಜೂರು ಮಾಡಿದ್ದಾರೆ. ಈ ಪರಿಹಾರವನ್ನು ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಜುಲೈ, ಅಗಸ್ಟ್, ಸೆಪ್ಟರಂಬರ್, ಅಕ್ಟೋಬರ ತಿಂಗಳುಗಳಲ್ಲಿ ಮನೆ ಹಾನಿಯಾಗಿರುವ ಮತ್ತು ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿದಂತೆ ಎ ಮತ್ತು ಬಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ 95,100 ರೂ.ಗಳನ್ನು ಮತ್ತು ಸಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ 50 ಸಾವಿರ ರೂ.ಗಳನ್ನು ಫಲಾನುಭವಿಗಳ ಖಾತೆಗೆ ತಕ್ಷಣಕ್ಕೆ ನೇರ ಜಮೆ ಮಾಡಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಸರ್ಕಾರದ ಸುತ್ತೋಲೆಯಂತೆ ಎ ಮತ್ತು ಬಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ ಉಳಿದ ಪರಿಹಾರದ ಮೊತ್ತವನ್ನು ಆರ್‍ಜಿಎಚ್‍ಸಿಎಲ್‍ನಿಂದ ನೇರವಾಗಿ ಜಮೆ ಮಾಡಲಾಗುತ್ತದೆ.

ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಮನೆಗಳ ಸಮೀಕ್ಷೆಯನ್ನು ಪ್ರಾರಂಭಿಸಿ ನವೆಂಬರ್ 30 ರೊಳಗೆ ಪೂರ್ಣಗೊಳಿಸಬೇಕು. ಮತ್ತು ಪ್ರತಿ ದಿನ ಸಂಜೆ ಆಯಾ ತಹಶೀಲ್ದಾರರು ಅಂದು ಸಮೀಕ್ಷೆ ಮಾಡಿದ ವಿವರಗಳನ್ನು ಆರ್‍ಜಿಎಚ್‍ಸಿಎಲ್ ಪೋರ್ಟಲ್‍ಗೆ ದಾಖಲಿಸಬೇಕು ಮತ್ತು ಈ ಕುರಿತು ವರದಿಯನ್ನು ಅಂದೇ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.

ಜುಲೈ, ಅಗಸ್ಟ್, ಸೆಪ್ಟರಂಬರ್, ಅಕ್ಟೋಬರ ತಿಂಗಳುಗಳಲ್ಲಿ ಮನೆ ಹಾನಿಯಾಗಿರುವ ಪ್ರಕರಣಗಳ ಮಾಹಿತಿಯನ್ನು ಈಗಾಗಲೇ ಆಜಿಎಚ್‍ಸಿಎಲ್ ಪೋರ್ಟಲ್‍ಗೆ ದಾಖಲಿಸಲಾಗಿದೆ. ಮತ್ತು ದಾಖಲಿಸುವುದು ಬಾಕಿ ಉಳಿದಿದ್ದರೆ ವಿವರಗಳನ್ನು ದಾಖಲಿಸಿ, ಫಲಾನುಭವಿಗಳ ಖಾತೆಗೆ ಪರಿಹಾರವನ್ನು ಆರ್‍ಟಿಜಿಎಸ್ ಮಾಡಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ನವೆಂಬರ್ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಬಹಳಷ್ಟು ಮನೆಗಳು ಭಾಗಶಃ ಮತ್ತು ಕೆಲವು ಮನೆಗಳು ಪೂರ್ಣವಾಗಿ ಹಾನಿಯಾಗಿವೆ. ಈಗಾಗಲೇ ಅಧಿಕಾರಿಗಳು ಈ ಕುರಿತು ಪ್ರಾಥಮಿಕ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ನಾಳೆಯಿಂದ ಪ್ರತಿ ಗ್ರಾಮದಲ್ಲಿ ಆಯಾಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ಒರ್ವ ಇಂಜನೀಯರ ಸ್ಥಳ ತನಿಖೆ ಮಾಡಿ, ಮನೆ ಹಾನಿ ಕುರಿತು ವರದಿ ನೀಡಬೇಕು ಮತ್ತು ಅದೇ ದಿನ ತಹಶೀಲ್ದಾರ ಕಚೇರಿ ಸಿಬ್ಬಂದಿ ಆರ್‍ಜಿಎಚ್‍ಸಿಎಲ್ ಪೋರ್ಟಲ್‍ ನಲ್ಲಿ ದಾಖಲಿಸಬೇಕು. ತಹಶೀಲ್ದಾರರು ನಾಳೆಯಿಂದಲೇ ಫಲಾನುಭವಿಗಳ ಖಾತೆಗೆ ಸರ್ಕಾರದ ಆದೇಶದಂತೆ ಪರಿಹಾರ ಮೊತ್ತವನ್ನು ಆರ್‍ಟಿಜಿಎಸ್ ಮೂಲಕ ನೇರವಾಗಿ ಜಮೆ ಮಾಡಬೇಕೆಂದು ಅವರು ಸೂಚಿಸಿದರು.

ನವೆಂಬರ್ 30 ರೊಳಗೆ ಪರಿಹಾರ ವಿತರಣೆ ಕಾರ್ಯವನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿರುವುದರಿಂದ ಎಲ್ಲ ಗ್ರಾಮ ಲೇಕ್ಕಾಧಿಕಾರಿಗಳು ಮತ್ತು ಪಿಡಿಓಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಆದ್ಯತೆ ಮೇರೆಗೆ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಸಕಾಲಕ್ಕೆ ಸಮೀಕ್ಷೆ ಕಾರ್ಯ ಹಾಗೂ ಪರಿಹಾರ ಮೊತ್ತ ಜಮೆ ಮಾಡುವಲ್ಲಿ ವಿಳಂಬ ಮಾಡುವ ಹಾಗೂ ನಿದಾನಗತಿ ತೊರುವ ಅಧಿಕಾರಿ ಹಾಗೂ ಸಿಬ್ಬದಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿ ನೇರವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿಗದಿತ ಗುರಿ ಸಾಧಿಸುವಲ್ಲಿ ತಹಶೀಲ್ದಾರ ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ನಿರಂತರವಾಗಿ ಸಿಬ್ಬಂದಿಗಳ ಮೇಲೆ ನಿಗಾವಹಿಸಬೇಕು ಮತ್ತು ಕಡ್ಡಾಯವಾಗಿ ಅವರು ಸಹ ಕ್ಷೇತ್ರ ಭೇಟಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ವೆಬೇಕ್ಸ್ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ.ಬಿ., ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ.ಚೌಡನ್ನವರ, ಪಿಆರ್‍ಇಡಿಯ ಕಾರ್ಯಪಾಲಕ ಅಭಿಯಂತರ ರಾಜಕುಮಾರ ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ ಇಓಗಳು, ವಿವಿಧ ಇಲಾಖೆಗಳ ಇಂಜನೀಯರಗಳು, ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ವಿಭಾಗ ಸಿಬ್ಬಂದಿ ಭಾಗವಹಿಸಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ