ನವದೆಹಲಿ, ನ. 14: ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress) ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ. ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲು ಮುಂದಾಗಿದೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ (BJP), ಸಮಾಜವಾದಿ ಪಕ್ಷ (Samajawadi Party) ಹಾಗೂ ಬಹುಜನ ಸಮಾಜ ಪಕ್ಷ (Bahujana Samaj Party) ಗಳಿಗಿಂತ ಮೊದಲು ಕಾಂಗ್ರೆಸ್ (Congress) ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಶೇಕಡಾ 40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲು ಮುಂದಾಗಿದೆ. ಅದಲ್ಲದೆ ಈಗ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ತನ್ನ ಹುರಿಯಾಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಕಾಂಗ್ರೆಸ್ ಪರವಾದ ಅಲೆ ಸೃಷ್ಟಿ ಮಾಡಲು ಉತ್ತರ ಪ್ರದೇಶದಾದ್ಯಂತ ‘ಪ್ರತಿಜ್ಞಾ ಯಾತ್ರೆ’ (Congress Pratijna Yatra) ಹಮ್ಮಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh In charge and AICC General Secretary Priyanka Gandhi) ಈ ಹಿಂದೆ ಈ ಬಾರಿ ಶೇಕಡಾ 40ರಷ್ಟು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯನ್ನು ಮಹಿಳಾ ಪ್ರಧಾನವನ್ನಾಗಿ ಮಾಡುವುದಾಗಿ ಘೋಷಿಸಿದ್ದರು. ಇದೀಗ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಘೋಷಿಸಿದ್ದಾರೆ.