ಧಾರವಾಡ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್-19 ಎರಡನೇ ಅಲೆಯ ಸಹಾಯಧನ ಮೊತ್ತ 3,000 ರೂ. ಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಈಗಾಗಲೇ 3,000 ರೂ.ಗಳ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲು ಇ-ಗವರ್ನ್‍ರ್ಸ್ ಇಲಾಖೆಗೆ ಕಳುಹಿಸಲಾಗಿದೆ.
ಕಳುಹಿಸಲಾದ ಡೇಟಾದಲ್ಲಿ ಶೇ.90 ರಷ್ಟು ಪಾವತಿ ಆಗಿರುತ್ತದೆ. ಉಳಿದ ಶೇ.10 ರಷ್ಟು ಡೇಟಾದಲ್ಲಿ ಫಲಾನುಭವಿ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವುದಿಲ್ಲ. ಬ್ಯಾಂಕ್‍ನವರು ಬ್ಯಾಂಕ್ ಖಾತೆಯನ್ನು ಎನ್‍ಪಿಸಿಎಲ್ ಗೆ ಮ್ಯಾಪಿಂಗ್ ಮಾಡಿರುವುದಿಲ್ಲ. ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ಸಹಾಯಧನ ಮೊತ್ತ ಪಾವತಿಯಾಗಿರುವುದಿಲ್ಲ.
ಸಹಾಯಧನ 3,000 ರೂ.ಗಳನ್ನು ಮಂಡಳಿಯಿಂದ ಸ್ವೀಕರಿಸಿದೇ ಇರುವ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಬಗ್ಗೆ ಹಾಗೂ ಬ್ಯಾಂಕಿನವರು ಬ್ಯಾಂಕ್ ಖಾತೆಯನ್ನು ಎನ್‍ಪಿಸಿಎಲ್ ಗೆ ಮ್ಯಾಪಿಂಗ್ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ನವೆಂಬರ್ 30 ರೊಳಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬೇಕು ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.