ಬೆಂಗಳೂರು, ನವೆಂಬರ್ 8: ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ದೊಡ್ಡಜಾಲ ಮತ್ತು ರಾಜಾನುಕುಂಟೆ ಪಂಚಾಯತಿಗಳಿಗೆ ಭೇಟಿ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆಗೆ ಹಾಗೂ ಗ್ರಾಮೀಣ ಆರ್ಥಿಕತೆಗೆ ಮಹತ್ವ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಜಿಟಲ್ ಗ್ರಂಥಾಲಯಗಳಿಗೂ ಭೇಟಿ ನೀಡಿದ್ದಾಗಿ ತಿಳಿಸಿದ ಸಚಿವ ಕಪಿಲ್ ಮೊರೇಶ್ವರ ಪಾಟೀಲ್, ಭಾರತ್ ನೆಟ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ವ್ಯವಸ್ಥೆ ಉತ್ತಮಗೊಳಿಸುವಂತೆ ಸಲಹೆ ನೀಡಿದರು.
ಇದಕ್ಕೆ ಈಗಾಗಲೇ ರಾಜ್ಯದ 5960 ಗ್ರಾಮ ಪಂಚಾಯಿತಿಗಳಿಗೂ ಅಂತರ್ಜಾಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಟ್ಟಕಡೆಯ ವ್ಯಕ್ತಿಗೂ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಪ್ರಯತ್ನ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಮೃತ ಯೋಜನೆಯಡಿ 7500 ಸ್ತ್ರೀಶಕ್ತಿ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ರೂ.ಗಳ ಅನುದಾನ ನೀಡುವ ಯೋಜನೆಯನ್ನು ಘೋಷಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಸದೃಢವಾಗಿದ್ದು, ಅದನ್ನು ಇನ್ನಷ್ಟು ಬಲಪಡಿಸಲು ಆರ್ಥಿಕ ನೆರವು ಅಗತ್ಯವೆಂದ ಮುಖ್ಯಮಂತ್ರಿಗಳು, ಪಂಚಾಯತಿಗಳಲ್ಲಿ ಆರ್ಥಿಕತೆಯ ವಿಕೇಂದ್ರೀಕರಣವೂ ಆಗಬೇಕೆಂದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಟ್ಟಡಗಳಿಗೆ ಅನುದಾನ ದೊರೆತರೆ, ಆಸ್ತಿ ಸೃಜನೆಗೆ ಅನುಕೂಲವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
ಕೇಂದ್ರ ಸಚಿವರ ಮೂರು ದಿನಗಳ ರಾಜ್ಯ ಪ್ರವಾಸ
ಕೇಂದ್ರ ಪಂಚಾಯತ್‌ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಮೊರೇಶ್ವರ್ ಪಾಟೀಲ್ ಮೂರು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
14 ಹಾಗೂ 15ನೇ ಹಣಕಾಸು ಆಯೋಗದ ಮೂಲಕ ಹೆಚ್ಚಿನ ನೆರವು
ಬೆಂಗಳೂರು ಹೊರ ವಲಯದ ದೊಡ್ಡಜಾಲ ಗ್ರಾಮ ಪಂಚಾಯತ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಬಳಿಕ ಇಲ್ಲಿನ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ಡಿಜಿಟಲ್ ಗ್ರಂಥಾಲಯ ಮತ್ತು ಔಷಧ ಅಂಗಡಿಗಳಿಗೆ ಭೇಟಿ ನೀಡಿದರು. ನವರತ್ನ ಅಗ್ರಹಾರ ಶಾಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಕುರಿತು ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಪಿಲ್ ಮೊರೇಶ್ವರ್ ಪಾಟೀಲ್, ಗ್ರಾಮೀಣ ಪ್ರದೇಶವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಗ್ರಾಮೀಣ ಭಾಗದ ಅಭಿವೃದ್ಧಿ ಮಾಡಲು ಸರ್ಕಾರ ಗಮನಹರಿಸಿದೆ ಎಂದರು.
14 ಹಾಗೂ 15ನೇ ಹಣಕಾಸು ಆಯೋಗದ ಮೂಲಕ ಪಂಚಾಯತ್‌ಗಳಿಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ. ಕೇಂದ್ರದಿಂದ ಗ್ರಾಮೀಣ ಭಾಗಕ್ಕೆ 64 ಯೋಜನೆಗಳನ್ನು ಜಾರಿಗೊಳಿಸಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಅವರು ಇಂದು ಭೇಟಿ ನೀಡಿದರು.
ಮಂಗಳವಾರ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಬುಧವಾರ ಅವರು ದೆಹಲಿಗೆ ವಾಪಸಾಗಲಿದ್ದಾರೆ.