ಶಿವಮೊಗ್ಗ, ನವೆಂಬರ್ 6: ಶನಿವಾರ ಬೆಳಗಿನ ಜಾವ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿ ಮೂರು ಕಡೆ ದರೋಡೆ ಮಾಡಿದ್ದಾರೆ. ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಧ ಗಂಟೆಯೊಳಗೆ ಮೂವರನ್ನು ಬೆದರಿಸಿ ಹಣ, ಮೊಬೈಲ್, ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ.
ಘಟನೆ 1: ಬಸ್ ಇಳಿದವರ ಮೇಲೆ ದಾಳಿ
ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ ಪರಶುರಾಮ ಎಂಬುವವರು ಬೆಳಗ್ಗೆ 4 ಗಂಟೆ ಹೊತ್ತಿಗೆ ಭದ್ರಾವತಿ ನಗರಸಭೆ ಬಳಿ ಇಳಿದುಕೊಂಡಿದ್ದಾರೆ. ಆಸ್ಪತ್ರೆ ಕ್ರಾಸ್ ಬಳಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪರಶುರಾಮರನ್ನು ತಡೆದು ತರೀಕರೆಗೆ ಹೇಗೆ ಹೋಗಬೇಕು ಎಂದು ಕೇಳಿದ್ದಾರೆ. ಬಳಿಕ ಚಾಕು ತೋರಿಸಿ ಒಂದು ಮೊಬೈಲ್, ಜೇಬಿನಲ್ಲಿದ್ದ 10,220 ರೂ. ನಗದು, ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ಘಟನೆಯಲ್ಲಿ ಪರಶುರಾಮ ಅವರ ಕೈಗೆ ಚಾಕುವಿನಿಂದ ಗಾಯಗೊಳಿಸಿದ್ದಾರೆ.
ಘಟನೆ 2: ಮಾಂಗಲ್ಯ ಸರ ಅರ್ಧ ಕಟ್
ಬಳ್ಳಾರಿಯಿಂದ ಬಸ್‌ನಲ್ಲಿ ಭದ್ರಾವತಿಗೆ ಆಗಮಿಸಿದ್ದ ಉಮಾವತಿ ಎಂಬುವವರು ಎನ್‌ಎಸ್‌ಟಿ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಬೆಳಗ್ಗೆ 4.15ರ ಹೊತ್ತಿಗೆ ಬೈಕಿನಲ್ಲಿ ಬಂದ ಮೂವರು ಯುವಕರು, ಸಾಗರಕ್ಕೆ ಹೇಗೆ ಹೋಗಬೇಕು ಎಂದು ವಿಚಾರಿಸಿದ್ದಾರೆ. ಬಳಿಕ ಬೈಕ್‌ನಲ್ಲಿದ್ದ ಒಬ್ಬಾತ ಚಾಕು ತೋರಿಸಿ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ. ಆಗ ಉಮಾವತಿ ಅವರು ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದಾರೆ.
ಇದರಿಂದ ಕುಪಿತರಾದ ಉಳಿದ ಇಬ್ಬರು ಉಮಾವತಿಯನ್ನು ತಳ್ಳಿದ್ದಾರೆ. ಕೆಳಗೆ ಬಿದ್ದ ಉಮಾವತಿಯವರ ಮೊಣಕೈಗೆ ಗಾಯವಾಗಿದೆ. ಮಾಂಗಲ್ಯ ಸರ ತುಂಡಾಗಿದ್ದು, ಅರ್ಧ ಭಾಗವನ್ನು ಕಳ್ಳರು ಕಸಿದುಕೊಂಡು ಹೋಗಿದ್ದಾರೆ. 10 ರಿಂದ 12 ಗ್ರಾಂನಷ್ಟು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಇದರ ಮೌಲ್ಯದ ಸುಮಾರು 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಘಟನೆ 3: ಕೊರಿಯರ್ ಸರ್ವಿಸ್‌ನವರ ಮೇಲೆ ಹಲ್ಲೆ
ರಘು ಎಂಬುವವರು ತರೀಕೆರೆ ರಸ್ತೆಯಲ್ಲಿರುವ ಇ-ಕಾಮ್ ಎಕ್ಸ್‌ಪ್ರೆಸ್ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 3 ಗಂಟೆಗೆ ಲೋಡ್ ಬಂದಿದ್ದರಿಂದ ಕಚೇರಿಗೆ ತೆರಳಿ ಅನ್‌ಲೋಡ್ ಮಾಡಿಸಿ, ರಿಪೋರ್ಟ್ ಬರೆಯುತ್ತಿದ್ದರು. ಆಗ ಬೈಕಿನಲ್ಲಿ ಬಂದ ಮೂವರು ಯುವಕರು ‘ಇದು ಫ್ಲಿಪ್‌ಕಾರ್ಟ್ ಕೊರಿಯರ್ ಸಂಸ್ಥೆನಾ’ ಎಂದು ವಿಚಾರಿಸಿದ್ದಾರೆ. ಇಲ್ಲ ಎಂದು ಹೇಳುವಷ್ಟರಲ್ಲಿ ಒಬ್ಬಾತ ರಘು ಕಚೇರಿ ಒಳ ಬಂದು ಟೇಬಲ್ ಮೇಲಿದ್ದ ಮೊಬೈಲ್ ಎತ್ತುಕೊಂಡಿದ್ದಾನೆ.
ಇದನ್ನು ತಡೆಯಲು ಮುಂದಾದಾಗ ರಘುಗೆ ಚಾಕು ಚುಚ್ಚಲು ಮುಂದಾಗಿದ್ದಾನೆ. ದಾಳಿ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಿದ್ದರಿಂದ ರಘು ಕೈಬೆರಳಿಗೆ ಗಾಯವಾಗಿದೆ. ಜೊತೆಯಲ್ಲಿದ್ದ ಇನ್ನಿಬ್ಬರು ದುಷ್ಕರ್ಮಿಗಳು ಕಚೇರಿ ಬಳಿ ಬಂದು ರಘು ಅವರನ್ನು ಹಿಡಿದುಕೊಂಡು ಮೂರು ಸಾವಿರ ನಗದು ಕಸಿದುಕೊಂಡಿದ್ದಾರೆ.
ಈ ವೇಳೆ ರಘು ಒಬ್ಬ ದುಷ್ಕರ್ಮಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕುಪಿತಗೊಂಡ ಉಳಿದ ಇಬ್ಬರು, ರಘು ಮೇಲೆ ಕಲ್ಲು ಬೀಸಿದ್ದಾರೆ. ಆದರೆ ಆ ಕಲ್ಲು ರಘು ಅವರು ಹಿಡಿದುಕೊಂಡಿದ್ದ ದುಷ್ಕರ್ಮಿಯ ಕಾಲಿನ ಮೇಲೆ ಬಿದ್ದಿದೆ. ಆಗ ರಘುರವರ ಮೊಬೈಲ್ ಹಿಂತಿರುಗಿಸಿ, ಮೂವರು ರಘು ಅವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಶನಿವಾರ ಬೆಳಗಿನ ಜಾವ 4.25ರ ಹೊತ್ತಿಗೆ ಘಟನೆ ಸಂಭವಿಸಿದೆ.
ಭದ್ರಾವತಿಯ ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಈ ಕೃತ್ಯಗಳನ್ನು ಎಸಗಿದ್ದಾರೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.