ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ರಾಜಕುಮಾರನಂತೆ ಮೆರೆದಿದ್ದ ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಅಪ್ಪು ಇನ್ನಿಲ್ಲ ಎಂಬುದನ್ನು ಅಭಿಮಾನಿಗಳ ಕೈಯಲ್ಲಿ ಈ ಕ್ಷಣವೂ ಅರಗಿಸಿಕೊಳ್ಳಲು ಆಗುತ್ತಿಲ್ಲ.
ನೆಚ್ಚಿನ ನಟ ಸಾವಿನಿಂದ ಹೊರಬರಲಾಗದೇ ಅದೇ ನೋವಿನಲ್ಲಿ ಸಾವಿನ ಹಾದಿ ಹಿಡಿಯುತ್ತಿರುವವರ ಸಂಖ್ಯೆ ನಿಲ್ಲುತ್ತಿಲ್ಲ.
ಹೌದು, ಪುನೀತ್ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಆಘಾತದಿಂದ ಕೆಲವರು ಸ್ಥಳದಲ್ಲೇ ಪ್ರಾಣ ಬಿಟ್ಟಿರೆ, ಇನ್ನು ಕೆಲವು ಅಪ್ಪು ಕೊರಗಿನಲ್ಲೇ ತಮ್ಮ ಜೀವನವನ್ನು ಕೊನೆಯಾಗಿಸುತ್ತಿದ್ದಾರೆ. ಅದೇ ರೀತಿ ದಾವಣಗೆರೆಯಲ್ಲಿ ಓರ್ವ ಅಭಿಮಾನಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ದಾವಣಗೆರೆಯ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಸಿ. ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ಪುನೀತ್ ಅಭಿಮಾನಿ. ಈತ ವಿಜಯನಗರ ಬಡಾವಣೆಯ ಸಾಯಿ ಮಂದಿರ ಸಮೀಪದ ನಿವಾಸಿ. ಈತ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಯಾವ ಸಿನಿಮಾವನ್ನು ಬಿಡದೇ ನೋಡಿದ್ದ.
ಪುನೀತ್ ನಿಧನದ ದಿನದಿಂದ ಕುಮಾರ್ ಖಿನ್ನತೆಗೆ ಜಾರಿದ್ದ. ತುಂಬಾ ನೋವಿನಲ್ಲಿದ್ದ ಕುಮಾರ್ ನಿನ್ನೆ (ನವೆಂಬರ್ 2) ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.