.ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್, ಆಪ್ತರು ಹಾಗೂ ಅಭಿಮಾನಿಗಳಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್ಕುಮಾರ್ ತಮ್ಮ 46ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ಜೊತೆ ಆಪ್ತ ಸಂಬಂಧ ಹೊಂದಿದ್ದ ಡಿಕೆ ಶಿವಕುಮಾರ್ ಅಪ್ಪು ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ.
ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೊಯ್ದ ವಿಧಿ ಬಹಳ ಕ್ರೂರಿ. ಪುನೀತ್ ರಾಜ್ಕುಮಾರ್ ನನಗೆ ಆತ್ಮೀಯರಾಗಿದ್ದರು. ನಮ್ಮ ಕುಟುಂಬದ ಆತ್ಮೀಯ ಸ್ನೇಹಿತರಾಗಿದ್ದರು. ನಮ್ಮಿಬ್ಬರ ಕುಟುಂಬ ಸದಸ್ಯರ ನಡುವೆ ಉತ್ತಮ ಒಡನಾಟವಿತ್ತು. ಅವರಿಗೆ ಯಾವ ಕೆಟ್ಟ ಅಭ್ಯಾಸವೂ ಇರಲಿಲ್ಲ. ಬೇರೆ ಅಭ್ಯಾಸ ಅಂಟಿಸಲು, ರಾಜಕಾರಣಕ್ಕೂ ಎಳೆಯಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ, ಅದು ಸಾಧ್ಯವಾಗಿರಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವಿಬ್ಬರೂ ಒಟ್ಟಿಗೆ ವಾಕಿಂಗ್ ಮಾಡಿದ್ದೇವೆ. ಜಿಮ್ ಮಾಡಿದ್ದೇವೆ. ಚಿತ್ರರಂಗ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಶಿಸ್ತುಬದ್ಧ ಜೀವನ, ಕಟ್ಟುನಿಟ್ಟಿನ ವ್ಯಾಯಾಮದ ಮೂಲಕ ಪುನೀತ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.