ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದ ನಟ ಪುನೀತ್ ರಾಜ್ಕುಮಾರ್ ನಿಧನ ನಾಡಿಗೆ ತುಂಬಲಾರದ ನಷ್ಟ. ಈ ಸುದ್ದಿ ನಮಗೆ ಆಘಾತ ತಂದಿದೆ. ಎದೆನೋವಿನಿಂದ ಪುನೀತ್ ಆಸ್ಪತ್ರೆಗೆ ಸೇರಿದರು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಎಲ್ಲ ಪ್ರಯತ್ನ ಮಾಡಿದರಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.
ನಟ ಪುನೀತ್ ರಾಜ್ಕುಮಾರ್ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು. ನಿನ್ನೆಯಷ್ಟೇ ಕರೆ ಮಾಡಿ ಮಾತನಾಡಿದ್ದರು. ಇಂದು ನನ್ನ ಭೇಟಿಗೆ ಸಮಯ ಸಹ ನಿಗದಿ ಮಾಡಲಾಗಿತ್ತು. ಕನ್ನಡ ರಾಜ್ಯೋತ್ಸವದ ಕುರಿತು ಖಾಸಗಿ ವೆಬ್ಸೈಟ್ ಆರಂಭಿಸುವ ಕುರಿತು ನನ್ನನ್ನು ಭೇಟಿಯಾಗಲು ಉದ್ದೇಶಿಸಿದ್ದರು. ಆದರೆ ವಿಧಿಯಟ ಆಟ ಬೇರೆಯೇ ಆಗಿತ್ತು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ ತಂದೆ ಮೇರು ನಟ ಡಾ.ರಾಜ್ಕುಮಾರ್ ಅವರ ಗುಣಗಳನ್ನೇ ಪುನೀತ್ ರಾಜ್ಕುಮಾರ್ ಅಳವಡಿಸಿಕೊಂಡಿದ್ದರು. ಅವರ ಗೌರವಕ್ಕೆ ಧಕ್ಕೆಯಾಗದಂತೆ ಅಭಿಮಾನಿಗಳು ನಡೆದುಕೊಳ್ಳಬೇಕು. ಶಾಂತಿ ಕಾಪಾಡಬೇಕು. ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು.