ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಕನ್ನಡಕ್ಕಾಗಿ ನಾವು ಅಭಿಯಾನ’ ಎಂಬ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಬೆಳಗ್ಗೆ 11.06 ನಿಮಿಷಕ್ಕೆ ಸರಿಯಾಗಿ ರಾಜ್ಯಾದ್ಯಂತ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಬರೋಬ್ಬರಿ ಗಂಟೆಗೆ ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳನ್ನ ಹಾಡಲಾಯಿತು.
ಯಾವ ಹಾಡು ಹಾಡಲಾಯಿತು..?
ರಾಷ್ಟ್ರಕವಿ ಕುವೆಂಪು ರಚಿತ ‘ಬಾರಿಸು ಕನ್ನಡ ಡಿಂಡಿಮವ’, ಕೆ.ಎಸ್. ನಿಸಾರ್ ಅಹಮದ್ ರಚಿತ ‘ಜೋಗದ ಸಿರಿ ಬೆಳಕಿನಲ್ಲಿ..’ ಹಂಸಲೇಖ ರಚನೆಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಮೂರು ಗೀತೆಗಳನ್ನ ಹಾಡಲಾಯಿತು.
ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಗಡಿನಾಡು, ಹೊರನಾಡುಗಳಲ್ಲಿ ಏಕಕಾಲದಲ್ಲಿ ಈ ಮೂರು ಹಾಡುಗಳನ್ನ ಹಾಡಲಾಯಿತು. ಬೆಂಗಳೂರಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ವಿಧಾನಸೌಧ ಸಿಬ್ಬಂದಿಯಿಂದ ಹಾಗೂ ಗಾಂಧಿ ಪ್ರತಿಮೆ ಬಳಿ ಅಧಿಕಾರಿಗಳು ಗಾಯನ ಮಾಡಿದರು.
ಕನ್ನಡ ಉಳಿವಿಗಾಗಿ ಸಂಕಲ್ಪ
ಇದಾದ ಬಳಿಕ ಸಂಕಲ್ಪ ಸ್ವೀಕಾರ ಮಾಡಲಾಯಿತು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣವನ್ನ ತೊಟ್ಟರು. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡಿದರು.
ಬಿಇಎಲ್ನಲ್ಲೂ ಕನ್ನಡದ ಕಲರವ
ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ( ಬಿಇಎಲ್) ನಲ್ಲಿ ಕನ್ನಡ ಮಾತಾಡ್ ಮಾತಾಡ್ ಮಲ್ಲಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಇಎಲ್ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಲಕ್ಷಕಂಠಗಳಲ್ಲಿ ಕನ್ನಡ ಗೀತಗಾಯನ ಮೊಳಗಿತ್ತು. ಮೊದಲಿಗೆ ನಾಡಗೀತೆ ಆ ನಂತರ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮ್ಮದ್ರವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಏಕಕಾಲದಲ್ಲಿ ಮೊಳಗಿದವು.
ಈ ಸುಂದರ ಕಾರ್ಯಕ್ರಮದಲ್ಲಿ ಬಿಇಎಲ್ ನ ಮಾನವ ಸಂಪನ್ಮೂಲಗಳ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಆರ್.ಪಿ.ಮೋಹನ್ ಹಾಗೂ ಮುಖ್ಯ ಜಾಗೃತಿ ಅಧಿಕಾರಿಯಾದ ಶ್ರೀಕಾಂತ್ ವಾಲಘತ್ ಅವರು ಸೇರಿದಂತೆ 600 ಉದ್ಯೋಗಿಗಳು ನಾಡಗೀತೆ ಮತ್ತು ಅಭಿಮಾನವನ್ನು ವ್ಯಕ್ತಪಡಿಸುವಂತಹ ಕನ್ನಡ ಗೀತೆಗಳನ್ನು ಹಾಡಿದರು.
ಮಲ್ಪೆ ಬೀಚ್ನಲ್ಲಿ ಕನ್ನಡದ ಕಂಪು
ವಿಶೇಷ ಅಂದರೆ ಉಡುಪಿಯ ಮಲ್ಪೆ ಬೀಚ್ನಲ್ಲಿ ನೂರು ಮಂದಿ ಗಾಯನ ಮಾಡಿದರು. ಸೆಂಟ್ ಮೇರಿಸ್ ಐಲ್ಯಾಂಡ್ ಬಳಿಯ ನಡು ಸಮುದ್ರದಲ್ಲಿ ಕನ್ನಡದ ಕಂಪು ಮೊಳಗಿತು. ಹಾಗೇ ಮಂಗಳೂರಿನ ತಣ್ಣಿರುಬಾವಿ ಬೀಚ್ ನಲ್ಲಿ ಗೀತ ಗಾಯನ ನಡೆಯಿತು. ಇಲ್ಲಿ ಶಾಲಾ ಕಾಲೇಜು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಜೊತೆಗೆ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಮತ್ತಿತರರು ಭಾಗಿಯಾಗಿದ್ದರು.
ಮೈಸೂರು, ಕೊಪ್ಪಳದಲ್ಲೂ ಕನ್ನಡ ಡಿಂಡಿಮವ
ಹಾಗೆಯೇ ಕೊಪ್ಪಳದಲ್ಲೂ ಕನ್ನಡದ ಕಂಪು ಪಸರಿಸಲಾಯಿತು. ರಾಜ್ಯೋತ್ಸವ ನಿಮಿತ್ಯ ಲಕ್ಷ ಕಂಠಗಳ ಗೀತ ಗಾಯನ ನಡೆಯಿತು. ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಮೈಸೂರಿನಲ್ಲಿಯೂ ಕನ್ನಡಕ್ಕಾಗಿ ನಾವು ಅಭಿಯಾನ ನಡೆಯಿತು. ಮೈಸೂರಿನ ಓವೆಲ್ ಮೈದಾನದಲ್ಲಿ ಸಾಮೂಹಿಕ ಗೀತ ಗಾಯನ ಆಯೋಜನೆ ನಡೆಯಿತು. ಗೀತಾಗಾಯನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾಲೇಜು ಯುವಕ ಯುವತಿಯರು ಟಪ್ಪಾಂಗುಚ್ಚಿ ಹೆಜ್ಜೆ ಹಾಕಿ ಸಂಭ್ರಮಿಸಿದರು.