ಧಾರವಾಡ: ವಿಷ ಪ್ರಾಶನವಾಗಿ ಹತ್ತು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ತನ್ವೀರ ಮೃತಪಟ್ಟ ಹತ್ತು ತಿಂಗಳ ಮಗು. ನಿನ್ನೆ ಏಕಾಏಕಿ ಅಸ್ವಸ್ಥಗೊಂಡಿದ್ದ ಮಗುವನ್ನು ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು. ಆದರೆ ಮಗುವಿನ ಮೃತದೇಹದಿಂದ ದುರ್ವಾಸನೆ ಬರಲು ಆರಂಭಿಸಿದ ಬಳಿಕ ವಿಷ ಹಾಕಿರೋ ಶಂಕೆ ವ್ಯಕ್ತವಾಗಿತ್ತು.

ವಿಷ ಹಾಕಿರೋ ಶಂಕೆ ವ್ಯಕ್ತವಾಗುತ್ತಿದಂತೆ ತಂದೆ ಮಹಮ್ಮದ ಅಲಿ ಪತ್ನಿ ಸಮ್ರಿನ್ ಮೇಲೆ ಆರೋಪ ಮಾಡಿದ್ರೆ, ಪತ್ನಿ-ಪತ್ನಿಯ ವಿರುದ್ಧ ಆರೋಪ ಮಾಡಿದ್ದರು. ಮಗುವಿನ ಸಾವಿನ ಬಗ್ಗೆ ತಂದೆ-ತಾಯಿ ಮಧ್ಯೆ ಜಗಳ ಆರಂಭವಾದ ಕಾರಣ ಮಗುವಿನ ಮೃತದೇಹ ಜಿಲ್ಲಾಸ್ಪತ್ರೆ ಶವಗಾರದಲ್ಲೇ ಉಳಿದುಕೊಂಡಿದೆ.
ಇತ್ತ ಎರಡು ಕಡೆಯ ಕುಟುಂಬಸ್ಥರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಘಟನೆ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಇತ್ತ ದಾಖಲಿಸಿರೋ ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲು ನಿರ್ಧಾರ ಮಾಡಿದ್ದು, ಎಫ್‌ಎಸ್‌ಎಲ್ ವರದಿ ಬಳಿಕ ಮುಂದಿನ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.