ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಭ್ರಷ್ಟಾಚಾರ, ತೆರಿಗೆ ವಂಚನೆ ಮತ್ತು ಅಕ್ರಮ ಹಣದ ವಹಿವಾಟು ಕುರಿತು ಶುಕ್ರವಾರವೂ ಶೋಧ ಮುಂದುವರಿಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿ ಸಚಿವಾಲಯ ಸಿಬ್ಬಂದಿಯಾಗಿದ್ದ ಆಯನೂರು ಉಮೇಶ್ ನಿವಾಸದಿಂದ ಜಲ ಸಂಪನ್ಮೂಲ ಇಲಾಖೆಯ ಅಧೀನದ ನೀರಾವರಿ ನಿಗಮಗಳ ಕಾಮಗಾರಿಗಳ ಟೆಂಡರ್‌ಗಳಿಗೆ ಸಂಬಂಧಿಸಿದ ಅಪಾರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉಮೇಶ್, ದೀರ್ಘಕಾಲದಿಂದ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದರು.
ಬಿ.ವೈ. ವಿಜಯೇಂದ್ರ ಸೂಚನೆಯಂತೆ ಸರ್ಕಾರದ ಪ್ರಮುಖ ಇಲಾಖೆಗಳ ಟೆಂಡರ್ ಪ್ರಕ್ರಿಯೆ, ಬಿಲ್ ಪಾವತಿಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದ ಆರೋಪವಿದೆ. ಈ ಸಂದರ್ಭದಲ್ಲಿ ಹಣದ ಅಕ್ರಮ ವಹಿವಾಟು ನಡೆಸಿರುವ ದೂರನ್ನು ಆಧರಿಸಿ ಐ.ಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಉಮೇಶ್, ಅವರ ನಿಕಟವರ್ತಿಗಳು, 31 ಗುತ್ತಿಗೆದಾರರು ಮತ್ತು ಲೆಕ್ಕಪರಿಶೋಧಕರ ಮೇಲೆ ಗುರುವಾರ ಐ.ಟಿ ದಾಳಿ ನಡೆದಿತ್ತು. ಶುಕ್ರವಾರವೂ ಕಾರ್ಯಾಚರಣೆ ಮುಂದುವರಿದಿದ್ದು, ರಾಜ್ಯದ ಹಲವೆಡೆ ಶೋಧ ನಡೆಸಲಾಗಿದೆ. ಗುತ್ತಿಗೆದಾರರನ್ನು ಮನೆಗೆ ಕರೆಸಿಕೊಂಡು ‘ವ್ಯವಹಾರ’ ನಡೆಸುತ್ತಿದ್ದ ಆರೋಪದ ಕುರಿತು ಐ.ಟಿ ಅಧಿಕಾರಿಗಳು ಉಮೇಶ್ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಾಜಿನಗರ ಭಾಷ್ಯಂ ವೃತ್ತದಲ್ಲಿರುವ ಉಮೇಶ್ ಮನೆಯಿಂದ ಗುರುವಾರ ಎರಡು ಮೂಟೆಗಳಿಗೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶುಕ್ರವಾರವೂ ಶೋಧ ಮುಂದುವರಿಸಿದ ತನಿಖಾ ತಂಡ, ಮತ್ತಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಕೃಷ್ಣ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮಗಳ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ನೂರಾರು ಕಡತಗಳನ್ನು ವಶಕ್ಕೆ ಪಡೆಯ
ಲಾಗಿದೆ ಎಂದು ಮೂಲಗಳು ತಿಳಿಸಿವೆ.