ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಮಾಡಿರುವ ದಸರಾ ದೀಪಾಲಂಕಾರದಲ್ಲಿ ಮೈಸೂರು ನಗರ ಮಿಂದೇಳುತ್ತಿದೆ.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ನಿರ್ಮಿಸಿರುವ ಹಸಿರುಚಪ್ಪರದ ಮಂಟಪ ಕಣ್ಮನ ಸೆಳೆಯುತ್ತಿದೆ.ಇಡೀ ನಗರ ವಿದ್ಯುದ್ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದು ಇಂದ್ರನ ಅಮರಾವತಿಯೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತಿದೆ. ಈ ಸುಂದರ ದೃಶ್ಯಗಳನ್ನು ನೋಡಲು ಜನ ರಾತ್ರಿಯಾಗುತ್ತಿದ್ದಂತೆಯೇ ಮುಗಿ ಬೀಳುತ್ತಿದ್ದಾರೆ.
ಕಳೆದ ವರ್ಷದ ದಸರಾದಲ್ಲಿ 50ಕಿ.ಮೀ. ವ್ಯಾಪ್ತಿಯಲ್ಲಿದ್ದ ದೀಪಾಲಂಕಾರವನ್ನು ಈ ಬಾರಿ 106 ಕಿ.ಮೀ.ಗೆ ಹೆಚ್ಚಿಸಿ ದೀಪಾಲಂಕಾರ ಮಾಡಲಾಗಿದೆ. ನಗರದ ಎಲ್ಲಾ ಪ್ರಮುಖ ರಸ್ತೆ ಹಾಗೂ 96ವೃತ್ತಗಳಲ್ಲಿ ವಿದ್ಯುದ್ದೀಪದ ಅಲಂಕಾರ ಮಾಡಿದ್ದು,ಸುಮಾರು 4 ಕೋಟಿ 68 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಪ್ರತಿ ನಿತ್ಯ 7 ಗಂಟೆಯಿಂದ ರಾತ್ರಿ 9ರವರೆಗೆ ನಗರವನ್ನು ವಿದ್ಯುದ್ದೀಪದ ಅಲಂಕಾರಗಳು ನಗರವನ್ನು ಬೆಳಗುತ್ತಿವೆ.
ಸುಮಾರು 106 ಕಿ.ಮೀ ವ್ಯಾಪ್ತಿಯಲ್ಲಿ ನಗರದ 121 ರಸ್ತೆಗಳು, 96 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ನಗರದ ಮಹಾರಾಜ ಕಾಲೇಜು ಮೈದಾನದ ಬಳಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಪ್ರತಿಕೃತಿ ದಸರಾದ ದೀಪಾಲಂಕಾರದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ. ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ ಭೂಪಟ, ಸ್ವಾತಂತ್ರ್ಯ ಹೋರಾಟಗಾರರು, ದೇಶದ ನಾಯಕರು, ರಾಮಸ್ವಾಮಿ ವೃತ್ತದಲ್ಲಿ ಮೈಸೂರು ಅರಮನೆ, ರಾಜ್‌ಕುಮಾರ್ ಉದ್ಯಾನದ ಬಳಿ ವಿಷ್ಣು, ಶ್ರೀಕೃಷ್ಣ ರಥ, ಗನ್‌ಹೌಸ್ ಬಳಿ ಸುತ್ತೂರು ಮಠದ ಶ್ರೀ ರಾಜೇಂದ್ರ ಸ್ವಾಮೀಜಿ, ಜಯಚಾಮರಾಜೇಂದ್ರ ಒಡೆಯರ್, ನಗರದ ಎಲ್‌ಐಸಿ ಕಚೇರಿ ವೃತ್ತದಲ್ಲಿ ವಿವಿಧ ಪ್ರಾಣಿಗಳ ಕಲಾಕೃತಿಗಳು ರಾರಾಜಿಸುತ್ತಿವೆ. ಒಟ್ಟಾರೆ ಈ ಬಾರಿ ದಸರಾ ಆಚರಣೆ ಸರಳವಾದರೂ ದೀಪಾಲಂಕಾರ ಮಾತ್ರ ಅದ್ಧೂರಿಯಾಗಿರುವುದು ವಿಶೇಷವಾಗಿದೆ.