ಶಿರಸಿ: ವಿಧಾನ ಪರಿಷತ್ ಸ್ಥಾನಕ್ಕೆ ದಮ್ಮಿಲ್ಲ,ಹೀಗಾಗಿ ನಾನು ಶಾಸಕ ಆಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳದಿಂದ ಸ್ಪರ್ಧಿಸುವುದು ಖಂಡಿತ ಎಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್ ಅವರು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಾಕ್ ನೀಡಿದ್ದಾರೆ.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಹಳಿಯಾಳದಲ್ಲಿ ಬಲವಾಗಿಯೇ ಇದೆ. ಯಾವುದೇ ಬಿರುಕು ಇಲ್ಲ. ಬಿರುಕು ಅವರು ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ.ನಾನು ಕಾಂಗ್ರೆಸ್ ಹಾಗೂ ನನ್ನ ಅಭಿಮಾನಿ ಬಳಗ ಎರಡರಲ್ಲೂ ಇದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದರು.
ನಾನೀಗ ಎಂಎಲ್‌ಸಿಯಾಗಿದ್ದೇನೆ, ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ. ಪಕ್ಷದ ಬಲವರ್ಧನೆಗೆ ಸದಾ ಕೆಲಸ ಮಾಡುತ್ತಿದ್ದೇನೆ, ಬೆಂಕಿ ಹಚ್ಚಿದವರು ಅವರು, ನಾವು ಅದಕ್ಕೆ ಪೆಟ್ರೋಲ್ ಸುರಿದೆವು. ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಂತೂ ಖಚಿತ. ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಪಕ್ಷದ ಟಿಕೆಟ್ ಸಿಗದೇ ಹೋದರೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಮುಂದಿನ ತೀರ್ಮಾನ ಏನೇ ತೆಗೆದುಕೊಳ್ಳುವುದಿದ್ದರೂ ಕಾರ್ಯಕರ್ತರ, ಬೆಂಬಲಿಗರ ಜೊತೆ ಮಾತನಾಡಿಯೇ ತೆಗೆದುಕೊಳ್ಳುತ್ತೇನೆ. ನನಗೆ ಟಿಕೆಟ್ ಸಿಗದೇ ಹೋದರೆ ಹಳಿಯಾಳದ ರಾಜಕೀಯ ವಾತಾವರಣವೇ ಬದಲಾಗಿ ಹೋಗುತ್ತದೆ ಎಂದರು.