ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ 2013 ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ತದನಂತರ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಡಿಸಲು ಉಮೇಶ್ ರೆಡ್ಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
ಬೆಂಗಳೂರು: ವಿಕೃತಕಾಮಿ ಉಮೇಶ್ ರೆಡ್ಡಿಗೆ ಇಂದು ಕರ್ನಾಟಕ ಹೈಕೋರ್ಟ್ನಿಂದ ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು, ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲು ಹೈಕೋರ್ಟ್ಗೆ ಉಮೇಶ್ ರೆಡ್ಡಿ ವಕೀಲ ಬಿ.ಎನ್. ಜಗದೀಶ್ ಮೂಲಕ ಅರ್ಜಿ ಸಲ್ಲಿಸಿದ್ದ. 10 ವರ್ಷಗಳಿಂದ ತನ್ನನ್ನು ಒಂಟಿಸೆರೆಯಲ್ಲಿಡಲಾಗಿದೆ. ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬಿಸಲಾಗಿದೆ. ಇದರಿಂದ ಮಾನಸಿಕ ಯಾತನೆ ಅನುಭವಿಸಿದ್ದಾಗಿ ಉಮೇಶ್ ರೆಡ್ಡಿ ವಕೀಲರ ಮೂಲಕ ತನ್ನ ವಾದ ಮುಂದಿಟ್ಟಿದ್ದ. ಆದರೆ ಕೋರ್ಟ್ ಉಮೇಶ್ ರೆಡ್ಡಿಯ ವಾದವನ್ನು ತಳ್ಳಿಹಾಕಿದ್ದು ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ವಿಳಂಬ ಮಾಡಿಲ್ಲ. ಉಮೇಶ್ ರೆಡ್ಡಿಯನ್ನು ಒಂಟಿ ಸೆರೆವಾಸದಲ್ಲಿದ್ದ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.
ಆದರೆ ಉಮೇಶ್ ರೆಡ್ಡಿ ಕೋರಿದ್ದ ಸಮಯದ ಅವಕಾಶವನ್ನು ಕೋರ್ಟ್ ಒಪ್ಪಿದ್ದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು 6 ವಾರ ಕಾಲಾವಕಾಶ ನೀಡಲಾಗಿದೆ. 6 ವಾರ ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸುವಂತಿಲ್ಲ. ಗಲ್ಲು ಶಿಕ್ಷೆಯಾದ ಕಾರಣ ಈ ಕಾಲಾವಕಾಶ ನೀಡುತ್ತಿದ್ದೇವೆ ಎಂದು ನ್ಯಾ. ಅರವಿಂದ್ ಕುಮಾರ್, ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಸ್ಪಷ್ಟನೆ ನೀಡಿದ್ದಾರೆ.
ಫೆಬ್ರವರಿ 28, 1998 ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007 ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಲ್ಲದೇ ಹಲವು ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಆರೋಪಿಯಾಗಿದ್ದ. 6 ಬಾರಿ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ. ಮೊದಲಿಗೆ ಪೊಲೀಸ್ ಕೆಲಸದಲ್ಲಿದ್ದು ಸೇವೆಯಿಂದ ವಜಾಗೊಂಡಿದ್ದ ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ ಜೈಲಿನಲ್ಲಿ ಬೆತ್ತಲಾಗಿ ತಿರುಗುತ್ತಿದ್ದ ಎಂದು ಸಹ ವರದಿಯಾಗಿತ್ತು.ಹೈಕೋರ್ಟ್ ಅರ್ಜಿಯ ವಿರುದ್ಧ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಎತ್ತಿ ಹಿಡಿದಿತ್ತು.
ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ 2013 ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ತದನಂತರ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಡಿಸಲು ಉಮೇಶ್ ರೆಡ್ಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.