ಬೆಳಗಾವಿ: ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಶಾಕ್ ಕೊಟ್ಟಿದೆ. ಅಲರವಾಡದಲ್ಲಿ ನಿರ್ಮಾಣವಾಗ್ತಿದ್ದ ಎಸ್ಟಿಪಿ ಘಟಕ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ಮಾಡಲು ಲೋಕಾಯುಕ್ತಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಈಗಾಗಲೇ 2 ಕೋಟಿ ಖರ್ಚು ಮಾಡಿ ಬೇರೆ ಕಡೆ ನಿರ್ಮಾಣ ಮಾಡ್ತಿದೆ. ಮೊದಲು ಶುರುವಾಗಿದ್ದ ಜಾಗಕ್ಕೆ 2 ಕೋಟಿ ಖರ್ಚು ಮಾಡಿ ವ್ಯರ್ಥ ಮಾಡಿದೆ. ಬೆಳಗಾವಿ ಮ. ಪಾಲಿಕೆ ಈಗ ಬೇರೆ ಜಾಗದಲ್ಲಿ ನಿರ್ಮಾಣ ಮಾಡ್ತಿದೆ ಎನ್ನಲಾಗಿದೆ. ಪ್ರಕರಣದ ತನಿಖೆ ಮಾಡಲು ಲೋಕಾಯುಕ್ತಕ್ಕೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಈಗ ಪ್ರಕರಣದ ಹಿಂದೆ ಇದ್ದ ಅಧಿಕಾರಿಗಳು, ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.
ನಾರಾಯಣ ಬೈರು ಸಾವಂತ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆಯಿತು. ಇನ್ನು ಇದಕ್ಕೆ ಪಾಲಿಕೆ ಆಯುಕ್ತರ ಹಣ ಖರ್ಚಾಗಿಲ್ಲ ಅಂತಾ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ ಪಾಲಿಕೆ ಇತರೆ ದಾಖಲೆಗಳಲ್ಲಿ ಹಣ ಖರ್ಚು ಆಗಿರುವುದು ಸಾಬೀತಾಗಿದೆ ಎನ್ನಲಾಗಿದ್ದು ಈ ಗೊಂದಲ ನಿವಾರಣೆಗೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ. ಲೋಕಾಯುಕ್ತ ಸಂಸ್ಥೆ ಕೇಸ್ ತನಿಖೆ ಮಾಡಿ ವರದಿ ನೀಡಬೇಕು. ಮುಂದಿನ ನವೆಂಬರ್ 25ರ ಒಳಗೆ ಹೈಕೋರ್ಟ್ಗೆ ತನಿಖಾ ವರದಿ ನೀಡಬೇಕು ಎಂದು ಹೇಳಿದೆ.
ಯೋಜನೆಯನ್ನು ಅಲರವಾಡದಿಂದ ಹಲಗೆ ಗ್ರಾಮಕ್ಕೆ ಸ್ಥಳಾಂತರ ಯಾಕೆ..? ಈ ಯೋಜನೆಯನ್ನು ಅರ್ಧಕ್ಕೆ ಏಕೆ ಮೊಟಕುಗೊಳಿಸಲಾಯಿತು..? ಸೂಕ್ತ ಸ್ಥಳ ಎಂದು ಪರಿಶೀಲನೆ ಮಾಡದೇ ಕಾಮಗಾರಿ ಆರಂಭಿಸಲಾಗಿತ್ತಾ.? ಈ ಯೋಜನೆಯ ಬಗ್ಗೆ ಪಾಲಿಕೆ ಸೂಕ್ತ ವಿವೇಚನೆ ಬಳಕೆ ಮಾಡಿಲ್ವಾ.? ಈಗ ಖರ್ಚು ಆಗಿರುವ 2.28 ಕೋಟಿ ತೆರಿಗೆ ಹಣ ವ್ಯರ್ಥವಾಗಿಲ್ಲವೇ.? ಸಾರ್ವಜನಿಕರ ತೆರಿಗೆ ಹಣ ಹೀಗೆ ಪೋಲು ಮಾಡುವುದು ಎಷ್ಟು ಸೂಕ್ತ.? ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರ ಸೂಕ್ತ ಆಫಿಡವಿಟ್ ಹಾಕಬೇಕು ಎಂದು ಇದೇ ವೇಳೆ ಕೋರ್ಟ್ ಹೇಳಿದೆ.