ಮುದ್ದೇಬಿಹಾಳ: ಮಿಣಜಗಿ, ಹೂವಿನ ಹಿಪ್ಪರಗಿ ಭಾಗದಿಂದ ತಾಳಿಕೋಟೆ ಪ್ರವೇಶಿಸುವ ಡೋಣಿ ನದಿಯ ಮೇಲಿನ ದಶಕಗಳಷ್ಟು ಹಳೇಯದಾದ ಸೇತುವೆಯ ಅಂದಾಜು 15 ಮೀಟರ್ನಷ್ಟು ಭಾಗ ಕುಸಿಯತೊಡಗಿದ್ದು, ಅದರ ಮುಂದಿನ ಭಾಗವೂ ನಿಧಾನವಾಗಿ ಕುಸಿಯತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಭವನೀಯ ಅನಾಹುತ ತಪ್ಪಿಸಲು ಸೇತುವೆಯ ಮೇಲೆ ಸಂಚಾರವನ್ನು ಸೋಮವಾರ ಸಂಜೆಯಿಂದಲೇ ಬಂದ್ ಮಾಡಲಾಗಿದೆ. ಇದರಿಂದಾಗಿ ಮುದ್ದೇಬಿಹಾಳ, ಹೂವಿನ ಹಿಪ್ಪರಗಿ ಮತ್ತು ಮಿಣಜಗಿ ಭಾಗದಿಂದ ತಾಳಿಕೋಟೆ ಪ್ರವೇಶ ಬಂದ್ ಆಗಿದೆ.
ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮತ್ತು ಪಿಡಬ್ಲೂಡಿ ಇಲಾಖೆಯ ವಿಜಯಪುರ, ಬೆಳಗಾವಿ ಕಚೇರಿಗಳ ಹಿರಿಯ ಅಧಿಕಾರಿಗಳು ಸೋಮವಾರ ಸಂಜೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಶಾಸಕರ ಮನವಿಯ ಮೇರೆಗೆ ಪಿಡಬ್ಲೂಡಿಯ ಬೆಂಗಳೂರು ಕಚೇರಿಯ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಸದ್ಯ ಸೇತುವೆ ಮೇಲೆ ಸಂಚಾರ ಬಂದ್ ಮಾಡಿದ್ದರಿಂದ ಪರದಾಟ ಕಂಡುಬರತೊಡಗಿದೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಸೇತುವೆ ಪಕ್ಕದಲ್ಲಿರುವ ನೆಲಮಟ್ಟದ ಹಳೇಯ ರಸ್ತೆಯನ್ನೇ ಸಂಚಾರಕ್ಕೆ ದುರಸ್ತಿ ಪಡಿಸಲು ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ.