ವಿಧಾನ ಪರಿಷತ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಷರಿಯತ್ ಕಾನೂನಿನಡಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಸಂಬಂಧ ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಿಯಮ 68ರ ಅಡಿಯಲ್ಲಿ ಸಾರ್ವಜನಿಕ ಮಹತ್ವದ ವಿಷಯದ (ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಹಾಗೂ ಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು) ಮೇಲೆ ನಡೆದ ಸುದೀರ್ಘ ಚರ್ಚೆ ನಂತರ ಸರ್ಕಾರದ ಪರ ಉತ್ತರ ನೀಡಿದರು.
ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಷರಿಯತ್ ಕಾನೂನಿನಂತೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಕಾನೂನಿನ ತಿದ್ದುಪಡಿ ಆಗುತ್ತಲೇ ಇದೆ. ಭಾರತೀಯ ದಂಡಸಂಹಿತೆಗೆ ತಿದ್ದುಪಡಿ ತರಬೇಕಾದರೇ ಕೇಂದ್ರ ಸರ್ಕಾರವೇ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಇಲ್ಲ. ಹೀಗಾಗಿ ಕಾನೂನು ಆಯೋಗದ ಮೂಲಕ ತಿದ್ದುಪಡಿಗೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಿದ್ದೇವೆ ಎಂದರು.
ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಕಾಲತ್ತು ನಡೆಸಲು ಸರ್ಕಾರಿ ವಕೀಲೆಯರನ್ನೇ ನೇಮಿಸಲಾಗುತ್ತದೆ. ಅಲ್ಲದೆ, ಸಾಧ್ಯವಿರುವ ಕಡೆ ಮಹಿಳಾ ಮ್ಯಾಜಿಸ್ಟ್ರೇಟ್‌ಗಳೇ ಇಂತಹ ಪ್ರಕರಣ ವಿಚಾರಣೆ ನಡೆಸುವಂತೆ ಮಾಡುತ್ತಿದ್ದೇವೆ. ತನಿಖೆಗೆ ಕೌಶಲ್ಯಾಧಾರಿತ ಹಾಗೂ ವಿಶೇಷ ತರಬೇತಿ ಪಡೆದಿರುವ ಮಹಿಳಾ ಅಧಿಕಾರಿಗಳನ್ನು ನಿಯೋಜನೆ ಮಾಡುತ್ತಿದ್ದೇವೆ. ಫೋಕ್ಸೋ ಕಾಯ್ದೆಯಡಿ ವಿಚಾರಣೆಗೆ ವಿಶೇಷ ನ್ಯಾಯಾಲಯ ಗಳನ್ನು ರೂಪಿಸಲಾಗಿದೆ. ಹಾಗೆಯೇ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಅತ್ಯಾಚಾರಿಗೆ ಭಯಾನಕವಾದ ಶಿಕ್ಷೆ ನೀಡಬೇಕು. ಇಂತಹ ಕೃತ್ಯ ಮಾಡುವವರಿಗೆ ಶಿಕ್ಷೆ ಪಾಠವಾಗಬೇಕು. ಇದರ ಜತೆಗೆ ಮಾನವೀಯ ಮೌಲ್ಯಗಳನ್ನು ಶಿಕ್ಷಣದ ಮೂಲಕ ಮಕ್ಕಳಿಗೆ ಕಲಿಸುವ ಕಾರ್ಯ ಆಗಬೇಕು.
-ಭಾರತಿಶೆಟ್ಟಿ, ಬಿಜೆಪಿ ಸದಸ್ಯೆ
ಪ್ರವಾಸಿ ಸ್ಥಳಗಳು, ದೇವಸ್ಥಾನ, ಧಾರ್ಮಿಕ ಕೇಂದ್ರ, ಉದ್ಯಾನವನಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವ ಕ್ರಮ ಆಗಲಿದೆ. ಪೊಲೀಸ್ ಗಸ್ತು ಮಾಡುವ ಜತೆಗೆ ಜನರ ಮಾನಸಿಕತೆಯಲ್ಲೂ ಬದಲಾವಣೆ ಆಗಬೇಕಿದೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ
Laxmi News 24×7