ಬೆಂಗಳೂರು: ದಪ್ಪ ಚರ್ಮದ ಬಿಜೆಪಿ ಸರ್ಕಾರಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿರುವ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಜನರ ಧ್ವನಿಯಾಗಿ ನಾವು ಹೋರಾಟ ಮಾಡುತ್ತಿದ್ದರೆ ಕಾಂಗ್ರೆಸ್ ನವರು ನಾಟಕವಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಧಾನಿ ಮೋದಿ ಸರ್ಕಾರ ದಪ್ಪ ಚರ್ಮದ ಸರ್ಕಾರ. ಬೆಲೆ ಏರಿಕೆಯನ್ನು ಬಹಳ ಲಘುವಾಗಿ ಮಾತನಾಡುತ್ತಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಧಿವೇಶನ ಆರಂಭದಂದು ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿದೆವು, ನಂತರ ಸೈಕಲ್ ಜಾಥಾ ಮೂಲಕ ಹೋರಾಟ ನಡೆಸಿದ್ದೇವೆ. ಇಂದು ಅಧಿವೇಶನದ ಕೊನೆ ದಿನ ಟಾಂಗಾ ಜಾಥಾ ಮೂಲಕ ಬೆಲೆ ಏರಿಕೆ ಖಂಡಿಸುತ್ತಿದ್ದೇವೆ. ಈ ಮೂಲಕ ಸರ್ಕಾರದ ಗಮನವನ್ನು ಮತ್ತೊಮ್ಮೆ ಸೆಳೆಯುತ್ತಿದ್ದೇವೆ ಎಂದರು.
ಪೆಟ್ರೋಲ್ ದರ 100 ರೂ. ತಲುಪಿದೆ. ಡೀಸೆಲ್ 90 ರೂಪಾಯಿ ಆಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಒಡವೆಗಳನ್ನು ಗಿರವಿ ಇಡುತ್ತಿದ್ದಾರೆ. 10-15 ಸಾವಿರ ಸಂಬಳ ಪಡೆಯುವವರು ಮನೆಗಳನ್ನು ಹೇಗೆ ನಿಭಾಯಿಸಬೇಕು? ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನರ ದ್ವನಿಯಾಗಿ ನಾವು ಹೋರಾಡಿದರೆ ನಮಗೆ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಹಾಗಾದರೆ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ವಾಜಪೇಯಿ ಮಾಡಿದ್ದು ನಾಟಕವೇ? ಇಂದು ಬೆಲೆ ಏರಿಕೆಯಿಂದ ಪ್ರತಿಯೊಬ್ಬರ ಮನೆಗೆ ಬೆಂಕಿ ಬಿದ್ದಿದೆ. ಜನರ ಜೇಬಿಗೆ ಕೈಹಾಕಿದ್ದಾರೆ. ತೈಲ ಬೆಲೆ ನೋಡಿದರೆ ಕಣ್ಣೀರುಬರುತ್ತಿದೆ. ಜನರ ಧ್ವನಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಬೆಲೆ ಏರಿಕೆ ಇಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಧಿವೇಶನದ ಬಳಿಕವೂ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.