ದಾವಣಗೆರೆ: ಗ್ರಾಮದಲ್ಲಿ ರಸ್ತೆ ಆಗೋವರೆಗೂ ಮದುವೆಯಾಗಲ್ಲ ಎಂದು ಯುವತಿಯೊಬ್ಬಳು ಮಾಡಿದ ಸಂಕಲ್ಪಕ್ಕೆ ಫಲ ಸಿಕ್ಕಿದ್ದು ಗ್ರಾಮಕ್ಕೆ ರಸ್ತೆಯ ಜೊತೆ ಬಸ್ ಕೂಡ ಆಗಮಿಸಿದ್ದು ಯವತಿ ಮಾಡಿದ ಸಂಕಲ್ಪದಿಂದ ಗ್ರಾಮದ ಬಹುದಿನಗಳ ಆಸೆ ಈಡೇರಿದಂತಾಗಿದೆ.
ಹೌದು ಜಿಲ್ಲೆಯ ಹೆಚ್.ರಾಂಪುರದ ಯುವತಿಯೊಬ್ಬಳು ತನ್ನ ಗ್ರಾಮಕ್ಕೆ ರಸ್ತೆಯಾಗಬೇಕು ಅಲ್ಲಿಯವರೆಗೆ ತಾನು ಮದುವೆಯಾಗಲ್ಲ ಎಂದು ವಿಭಿನ್ನವಾಗಿ ತನ್ನ ಆಕ್ರೋಶ ಹೊರಹಾಕಿದ್ದಳು. ಈ ಕುರಿತು ನ್ಯೂಸ್ಫಸ್ಟ್ ಸೆಪ್ಟೆಂಬರ್ 14 ರಂದು ವಿಸ್ತೃತ ವರದಿ ಬಿತ್ತರಿಸಿತ್ತು.
ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಗ್ರಾಮಕ್ಕೆ ಆಗಮಿಸಿ ಯುವತಿಯ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೆಟಿ ನೀಡಿದ 2 ದಿನಗಳ ಬಳಿಕ ರಸ್ತೆ ಕಾಮಗಾರಿ ಆರಂಭವಾಗಿದ್ದು, ಅದರ ಜೊತೆಗೆ ಇದೀಗ ಗ್ರಾಮಕ್ಕೆ ಬಸ್ ಸಂಚಾರ ಕೂಡ ಆರಂಭವಾಗಿದೆ. ರಸ್ತೆ ಮತ್ತು ಬಸ್ ಆಗಮನದಿಂದ ಗ್ರಾಮಸ್ಥರ ಮೊಗದಲ್ಲಿ ಹರ್ಷ ಮೂಡಿದೆ. ಬಸ್ಗೆ ಪೂಜೆ ಮಾಡುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.