ಇದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊಟ್ಟ ಟಾಂಗ್.
ಪ್ರಶ್ನೋತ್ತರ ವೇಳೆಯಲ್ಲಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಅವರು ಮುಖ್ಯಮಂತ್ರಿಗಳ ಅಮೃತ ಗ್ರಾಮಪಂಚಾಯಿತಿ ಯೋಜನೆಯನ್ನು ಪ್ರಸ್ತಾಪಿಸಿ ಗ್ರಾಮ ಪಂಚಾಯಿತಿಯೊಂದಕ್ಕೆ 25 ಲಕ್ಷ ರೂ. ಕೊಡುವುದಾಗಿ ಹೇಳಲಾಗಿದೆ. ಆದರೆ, ಹಣ ಬಿಡುಗಡೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಗಮನಸೆಳೆದರು. ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪೂರ ಈ ಪ್ರಶ್ನೆಗೆ ಪೂರಕವಾಗಿ ಮಾತಾಡಿದರು.
ಆಗ ಸಚಿವ ಈಶ್ವರಪ್ಪ ಉತ್ತರಿಸಿ, ಗ್ರಾಪಂಗಳಿಗೆ ಸಿಗುವ ಅನುದಾನಗಳಿಗೆ ಹೆಚ್ಚುವರಿಯಾಗಿ ಅಮೃತ ಯೋಜನೆಯಡಿ 25 ಲಕ್ಷ ನೀಡಲಾಗುತ್ತಿದೆ. ಅಲ್ಲಿನ ಕಾಮಗಾರಿಗಳು ಮತ್ತಿತರ ಅಭಿವೃದ್ಧಿ ಕಾರ್ಯಗಳು ಬೇಗ ಆಗಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ ಎಂದರು.
ಮಾತು ಮುಂದುವರಿಸಿದ ಸಚಿವರು, “ಅಮೃತ್ ಯೋಜನೆಯನ್ನು ಗುರುವಾರ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಉದ್ಘಾಟಿಸುತ್ತಿದ್ದಾರೆ. ಎಲ್ಲ ಶಾಸಕರು ಬರಬೇಕು’ ಎಂದು ಆಹ್ವಾನ ನೀಡಿದರು.
ಆಗ, ಬಸನಗೌಡ ಪಾಟೀಲ ಯತ್ನಾಳ್ ಅವರು, ಬರೀ 25 ಲಕ್ಷ ರೂ. ನೀಡಿಕೆಗೆ ಕೇಂದ್ರ ಸಚಿವರನ್ನು ಕರೆತಂದು ಯಾಕೆ ಅವಮಾನ ಮಾಡ್ತೀರಿ? ನೀವು ಕೊಡುವ 25 ಲಕ್ಷ ರೂ.ಸಾಕಾಗಲ್ಲ. ನೀವೇ ಇಟ್ಟುಕೊಳ್ಳಿ ಎಂದು ವ್ಯಂಗ್ಯವಾಡಿದರು. ಪ್ರತ್ಯುತ್ತರಿಸಿದ ಈಶ್ವರಪ್ಪ, “ನಿಮ್ಮ ಕ್ಷೇತ್ರದಲ್ಲಿ ಇರೋದು ಒಂದೇ ಗ್ರಾಮ ಪಂಚಾಯಿತಿ ಅಂತೀರಾ? ಮತ್ತೊಂದು ಪಂಚಾಯಿತಿ ಇದ್ರೆ ತಾನೇ ಹಣ ಕೊಡೋಕೆ ಸಾಧ್ಯ ಎಂದು ಹೇಳಿದರು.