Breaking News

ಜೋಕುಮಾರ ತರ್ತಾನಾ ಮಳೆ..! ಮಳೆ-ಬೆಳೆಯ ಪ್ರತೀಕ ಜೋಕುಮಾರನ ಹಬ್ಬ

Spread the love

ಬನಹಟ್ಟಿ : ನಮ್ಮದು ಸಂಪ್ರದಾಯ ಸಂಸ್ಕೃತಿಯ ನೆಲೆಬೀಡು, ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದ ಆಚರಿಸುತ್ತಾ ಬಂದ ಕೆಲ ಧಾರ್ಮಿಕ ಆಚರಣೆಗಳು ಇಂದಿಗೂ ನಮ್ಮಲ್ಲಿ ಪ್ರಸ್ತುತ ಎನ್ನುವುದಕ್ಕೆ ಉತ್ತರ ಕರ್ನಾಟಕದ ಜೋಕುಮಾರನ ಹಬ್ಬ ಕೂಡಾ ಒಂದು. ಹಿಂದಿನಿಂದ ತಮ್ಮ ಹಿರಿಯರು ಆಚರಿಸುತ್ತಾ ಬಂದ ಈ ಜೋಕುಮಾರನ ಹಬ್ಬ ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.

ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುವ ಜೋಕುಮಾರ ಜೋ ಎಂಬ ಮುನಿಯ ಮಗನು, ಜೇಷ್ಠಾ ದೇವಿಯ ಮಗನೆಂದು ಹೇಳಲಾಗುತ್ತಿದೆ. ಗಣಪ ಕುಳಿತು ತಿಂದು ಉಂಡು ಹೋದರೆ ಜೋಕುಮಾರ ಮಾತ್ರ ಭೂಮಂಡಲದಲ್ಲಿ ಓಣಿ ಓಣಿಗೂ ಸುತ್ತಾಡಿ, ಮಳೆ ಬೆಳೆ ಇಲ್ಲದೇ ಕಂಗಾಲಾಗಿರುವುದನ್ನು ಕಂಡು ಶಿವನಿಗೆ ವರದಿ ಒಪ್ಪಿಸಿ ಮಳೆ ತರುತ್ತಾನೆ ಎಂಬ ಪ್ರತೀತಿಯೂ ಇದೆ
ಕುಂಬಾರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೆರೆದಾಡಿ, ಕರ‍್ಯಾನವರ ಮನೆಯಲ್ಲಿ ಜಿಗಿದಾಡಿ ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ಮೊದಲಿನಿಂದ ಜಾರಿಯಲ್ಲಿದ್ದ ಪದ್ದತಿಯಾಗಿದೆ.

ಗಣಪತಿ ಕುಳಿತ 4ನೇ ದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಗಲ್ಲಿ ಗಲ್ಲಿ ಮನೆ ಮನೆ ತಿರುಗಾಡುತ್ತಾರೆ. ಜೋಕುಮಾರನ ಜಾನಪದ ಹಾಡುಗಳನ್ನು ಹಾಡುತ್ತಾ, ಕೇಳುಗರನ್ನು ಮಂತ್ರ ಮಗ್ದರನ್ನಾಗಿಸುತ್ತಾರೆ ಜೋಕುಮಾರನಿಗೆ ಗೋದಿ, ಜೋಳ, ಸಜ್ಜಿ ಹಣ ಸೇರಿದಂತೆ ಅನೇಕ ಪದಾರ್ಥಗಳನ್ನು ಜನ ನೀಡುತ್ತಾರೆ. ಬಂದ ಧಾನ್ಯಗಳಲ್ಲಿ ಕುಂಬಾರರು, ಕೇರಿಯ ಜನರು ಸೇರಿ ಮೂರು ಪಾಲು ಹಂಚಿಕೊಳ್ಳುತ್ತಾರೆ.

7 ದಿನಗಳ ವರೆಗೆ ನಗರದಲ್ಲಿ ತಿರುಗಾಡಿ 7ನೇ ರಾತ್ರಿ ಎಲ್ಲ ಜನ ಮಲಗಿದ ಮೇಲೆ ಕೇರಿಯಲ್ಲಿನ ದೇವಿಗುಡಿ ಕಟ್ಟೆಮೇಲೆ ಇಟ್ಟು ಬರುತ್ತಾರೆ. ನಂತರ ಕೇರಿಯ ಜನ ಜೋಕುಮಾರನ ಮೂರ್ತಿಮೇಲೆ ಬಾರಿಗಿಡದ ಕಂಟಿಯಿಂದ ಮುಚ್ಚಿ ಆತನ ಸುತ್ತಲೂ ಸುತ್ತುತ್ತಾರೆ. ಸುತ್ತುವಾಗ ಬಾರಿ ಕಂಟಿಗೆ ಸೀರೆ ಸಿಲುಕಿದಾಗ ಜೋಕುಮಾರ ಜಗ್ಗಿದಾ ಎಂದು ಭಾವಿಸಿ ಕಲ್ಲಿನಿಂದ, ಒಣಕೆಯಿಂದ ಜಡಿದು ತಲೆ ಬುರುಡೆ ಒಡೆಯುವುದು ವಾಡಿಕೆ. ನಂತರ ದಾಸರ ಪಡಿಯಲ್ಲಿ ಒಡೆದ ಮೂರ್ತಿ ಧಫನ್ ಮಾಡುತ್ತಾರೆ. ಮರುದಿನ ದಾಸರು(ಅಗಸರು) ಜೋಕುಮಾರನ ದಿನದ (ತಿಥಿ) ಕಾರ್ಯದ ಸಿಹಿ ಊಟ ಮಾಡಿ ಹಬ್ಬ ಮುಗಿಸುತ್ತಾರೆ.

ಈ ಹಬ್ಬ ಮಳೆ-ಬೆಳೆಯ ಪ್ರತೀಕವಾಗಿದೆ. ಮಳೆ ತರುವ ನಂಬಿಗಸ್ತನೆಂದು ರೈತಾಪಿ ಜನರು ಈತನನ್ನು ನಂಬಿದ್ದಾರೆ.

– ಕಿರಣ ಶ್ರೀಶೈಲ ಆಳಗಿ


Spread the love

About Laxminews 24x7

Check Also

ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದಲ್ಲಿ ಶಿಸ್ತುಕ್ರಮ :ಈಶ್ವರ ಖಂಡ್ರೆ

Spread the loveಚಾಮರಾಜನಗರ: ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವು ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ