ಬೆಂಗಳೂರು: ಮೈಸೂರಿನಲ್ಲಿ ಪುರಾತನ ಹಿಂದೂ ದೇವಾಲಯಗಳನ್ನು ತೆರವುಗೊಳಿಸಲಾಗಿದ್ದು, ಈ ವಿಚಾರವಾಗಿ ಕಿಡಿಕಾರಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದೂ ಭಾವನೆಗಳ ವಿರುದ್ಧದ ಕೃತ್ಯಕ್ಕೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ದೇವಾಲಯಗಳನ್ನು ಕೆಡವಿದ್ದು ಖಂಡನೀಯ. ಇದು ಹಿಂದೂ ಭಾವನೆಗಳಿಗೆ ನೋವುಂಟುಮಾಡಿದೆ. ಇದಕ್ಕೆ ಸರ್ಕಾರವೇ ಹೊಣೆ. ತೆರವುಗೊಳಿಸಿದ ದೇವಾಲಯವನ್ನು ಪುನರ್ ನಿರ್ಮಾಣಕ್ಕೆ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ನಂಜನಗೂಡಿನ ಹುಚ್ಚಗಣಿ ಗ್ರಾಮದ ಪುರಾತನ ದೇವಾಲಯವನ್ನು ಜಿಲ್ಲಾಡಳಿತ ನಿನ್ನೆ ನೆಲಸಮ ಮಾಡಿದ್ದು, ಸರ್ಕಾರದ ವಿರುದ್ಧ ಆರ್ ಎಸ್ ಎಸ್ ಕಾರ್ಯಕರ್ತರು ಕೂಡ ಕಿಡಿಕಾರಿದ್ದಾರೆ. ಹಿಂದೂ ಭಾವನೆಗಳಿಗೆ ಬಿಜೆಪಿ ಸರ್ಕಾರವೇ ಧಕ್ಕೆ ತರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ದೇವಾಲಯಗಳ ತೆರವು ಕ್ರಮಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.