ನವದೆಹಲಿ: ವಿಶ್ವಾದ್ಯಂತ ಐದು ಲಕ್ಷ ಮಂದಿಯನ್ನು ಬಲಿ ಪಡೆದಿರುವ ಕೊರೊನಾ ಸೋಂಕಿನ ಮೂಲ ಪತ್ತೆ ಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದು ಮುಂದಿನ ವಾರ ಚೀನಾಕ್ಕೆ ತೆರಳುವುದಾಗಿ ಡಬ್ಲ್ಯೂಹೆಚ್‍ಓ ಹೇಳಿದೆ.
ಕೊರೊನಾ ಸೋಂಕು ಕಾಣಿಸಿಕೊಂಡು ವಿಶ್ವಕ್ಕೆ ಹರಡಿದ ಆರು ತಿಂಗಳು ಬಳಿಕ ಅಧ್ಯಯನಕ್ಕೆ ಮುಂದಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ವುಹಾನ್‍ಗೆ ಭೇಟಿ ನೀಡಲಿದೆ. ಅಲ್ಲಿ ಕೊರೊನಾ ವೈರಸ್ ಹುಟ್ಟಿದ್ದೇಗೆ ಹಾಗೂ ಅದನ್ನು ಮಾನವನಿಗೆ ಹರಡಿದ್ದೇಗೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನ ಮಾಡುತ್ತಿದೆ.
ಸೋಂಕು ನಿಫಾ ವೈರಸ್ ಮಾದರಿಯಲ್ಲೇ, ಬಾವುಲಿಗಳ ಮೂಲಕ ಹರಡಿತೆ ಅಥವಾ ಇನ್ಯಾವ ಪ್ರಾಣಿಗಳ ಮಾರುಕಟ್ಟೆಯಿಂದ ಸೋಂಕು ಹಬ್ಬಿರಬಹುದ ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಲಂಕಷವಾಗಿ ಅಧ್ಯಯನ ನಡೆಸಲಿದೆ.
ಕೊರೊನಾ ವೈರಸ್ ಚೀನಾ ನಿರ್ಮಿತ, ಉದ್ದೇಶ ಪೂರ್ವಕವಾಗಿ ವೈರಸ್ ಹರಡುವ ಕಾರ್ಯ ಮಾಡಿದೆ ಎಂದು ಅಮೆರಿಕಾ ಸೇರಿದಂತೆ ವಿಶ್ವದ ಹಲವು ದೇಶಗಳು ಆರೋಪಿಸಿದ್ದಾವೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ ಸಭೆಯಲ್ಲಿ ಈ ಬಗ್ಗೆ ಚೀನಾ ವಿವರಣೆ ನೀಡಬೇಕು ಎಂದು ಒತ್ತಾಯಿಸಿತ್ತು.
ಸಾಕಷ್ಟು ದೇಶಗಳು ಒತ್ತಾಯದ ಬಳಿಕ ಮಧ್ಯಂತರ ವರದಿ ನೀಡಿದ್ದ ಚೀನಾ ಪೂರ್ಣ ಪ್ರಮಾಣದ ವರದಿ ನೀಡುವ ಪ್ರಯತ್ನ ಮಾಡಿರಲಿಲ್ಲ. ಪ್ರಾಣಿಗಳ ಮಾರುಕಟ್ಟೆಯಿಂದ ವೈರಸ್ ಮಾನವನಿಗೆ ಹರಡಿದೆ ಎಂದು ತನ್ನ ವರದಿಯಲ್ಲಿ ಸಮರ್ಥಿಸಿಕೊಂಡಿತ್ತು.
ಆರು ತಿಂಗಳ ವ್ಯಾಪ್ತಿ ಮೀರಿ ಸೋಂಕು ಹಬ್ಬುತ್ತಿದೆ. ಒಂದು ಕೋಟಿ ಹನ್ನೇಡು ಲಕ್ಷಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿಗೆ ಲಸಿಕೆ ಇಲ್ಲದ ಕಾರಣ ಇದು ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆಗಳಿದೆ ಎನ್ನಲಾಗಿದೆ.