ಬೆಂಗಳೂರು, ಸೆಪ್ಟೆಂಬರ್ 08: ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ಮತ್ತೊಮ್ಮೆ ಕನ್ನಡ ಭಾಷೆ ಸರ್ಚ್ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕ್ಷಮೆಯಾಚಿಸಿದೆ. ಕನ್ನಡವನ್ನು ಹೇವರಿಕೆ ಭಾಷೆ ಎಂದು ತೋರಿಸಿದ್ದ ಜಾಗತಿಕ ದೈತ್ಯ ಟೆಕ್ ಕಂಪೆನಿ ಹೈಕೋರ್ಟಲ್ಲಿ ಕ್ಷಮೆಯಾಚಿಸಿದ್ದರಿಂದ ಗೂಗಲ್ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಲಾಗಿದೆ.
ಗೂಗಲ್ ವಿರುದ್ಧ ಲೀಗಲ್ ಅಟಾರ್ನೀಸ್ ಮತ್ತು ಬ್ಯಾರಿಸ್ಟರ್ಸ್ ಸಂಸ್ಥೆಯ ಮೂಲಕ ಭಾರತೀಯ ಭ್ರಷ್ಟಾಚಾರ ವಿರೋಧಿ ಮಂಡಳಿ ಟ್ರಸ್ಟ್ ಸಲ್ಲಿಸಿದ್ದ ಮನವಿ(WP 9994/2021) ಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಗೂಗಲ್ ಇಂಡಿಯಾ ತನ್ನ ತಪ್ಪಿಗೆ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಲೀಗಲ್ ಅಟಾರ್ನೀಸ್ ಮನವಿಯನ್ನು ಹಿಂಪಡೆದಿದೆ.
We apologize for the misunderstanding and hurting any sentiments. pic.twitter.com/nltsVezdLQ
— Google India (@GoogleIndia) June 3, 2021
”ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಿಂದಾನಾತ್ಮಕ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಇತರೆ ಪ್ರತಿವಾದಿಗಳ ವಿರುದ್ಧ ಮನವಿ ಸಲ್ಲಿಸಲಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯ ತುಣುಕನ್ನೂ ಅರ್ಜಿದಾರರು ಮನವಿಯೊಂದಿಗೆ ಲಗತ್ತಿಸಿದ್ದರು. ಬಳಿಕ ತಾಣದಲ್ಲಿ ತೋರಿಸಲಾದ ಮಾಹಿತಿಗೆ ಸಂಬಂಧಿಸಿದಂತೆ ಗೂಗಲ್ ಕ್ಷಮೆ ಕೋರಿದ್ದು, ಇಂಥ ಪ್ರಕರಣ ಮುಂದೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಗೂಗಲ್ ಭರವಸೆ ನೀಡಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.
ತಪ್ಪಾಗಿ ಅರ್ಥೈಸಿಕೊಂಡಿರುವುದು ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ಸರ್ಚ್ ಇಂಜಿನ್ ಫಲಿತಾಂಶ ತೋರಿಸಿತ್ತು. ಗೂಗಲ್‌ನಲ್ಲಿ Ugliest Language of India ಎಂದು ಸರ್ಚ್ ಮಾಡಿದಾಗ ಕನ್ನಡ ಭಾಷೆಯನ್ನು ಹೇವರಿಕೆ ಭಾಷೆ ಎಂದು ಬಿಂಬಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಕನ್ನಡಿಗರು ಆಕ್ರೋಶ ಹೊರಹಾಕಿ, ಕ್ಷಮೆಯಾಚಿಸಲು ಆಗ್ರಹಿಸಿದ್ದರು. ಗೂಗಲ್ ಇಂಡಿಯಾವು ಜೂನ್ 3ರಂದು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಕ್ಷಮೆ ಕೋರಿತ್ತು.
”ಕಾನೂನಿನಲ್ಲಿ ಅವಕಾಶವಿರುವ ಇತರೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಒಳಗೊಂಡು ಮನವಿ ಹಿಂಪಡೆಯಲು ಅರ್ಜಿದಾರರ ಪರ ವಕೀಲರು ಕೋರಿದ್ದಾರೆ. ಹೀಗಾಗಿ, ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ವಿಲೇವಾರಿ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.
ಟೆಕ್ ದೈತ್ಯ ಗೂಗಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಕಾನೂನು ಕ್ರಮಕೈಗೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಪೀಠವನ್ನು ಮನವಿಯ ಮೂಲಕ ಕೋರಿದ್ದರು.
ಮಾನಹಾನಿ ಉಂಟು ಮಾಡಿದ್ದಕ್ಕೆ ಮತ್ತು ಕನ್ನಡ ಭಾಷೆಯ ಘನತೆಗೆ ಚ್ಯುತಿ ಉಂಟು ಮಾಡಿದ್ದಕ್ಕೆ ₹10 ಕೋಟಿಯನ್ನು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿನಲ್ಲಿ ಠೇವಣಿ ಇಡುವ ಮೂಲಕ ಪರಿಹಾರ ನೀಡಬೇಕು ಎಂದು ಮನವಿದಾರರು ಕೋರಿದ್ದರು.
Dear @Google @GoogleIndia this is the disrespect to the oldest language of the country #kannada
Moreover there is no such language which is ugly… every language has got its own respect n love 💛❤️
Hoping for the further serious action on this soon @sundarpichai @karnatakacom pic.twitter.com/lrXQxFa5Dx— Manjunath Devar (@devar_manjunath) June 3, 2021
ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟದ್ದು, ಕುರೂಪವಲ್ಲ. ಎಲ್ಲ ಭಾಷೆಗಳೂ ಸುಂದರವೇ, ಭಾಷೆ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಕನ್ನಡವನ್ನು ಅವಹೇಳನ ಮಾಡಿದ್ದ ವೆಬ್‌ಪುಟ ಡಿಲೀಟ್ ಆಗಿರಬಹುದು. ಆದರೆ, ಅದರಿಂದ ಕನ್ನಡಿಗರಿಗಾದ ನೋವಿಗೇನು ಪರಿಹಾರ? ಎಂದು ಮಾಜಿ ಮುಖ್ಯಮಂತ್ರಿ ಎಚ್ . ಡಿ ಕುಮಾರಸ್ವಾಮಿ ಕೇಳಿದ್ದರು. ಗೂಗಲ್‌ನಲ್ಲಿ ಭಾರತದ ಅತ್ಯಂತ ಕೊಳಕು ಭಾಷೆ ಎಂದು ಟೈಪ್ ಮಾಡಿದರೆ, ಕನ್ನಡ ಎಂದು ಬರುತ್ತಿತ್ತು. ಇದಕ್ಕೆ ಕಾರಣ ಸರ್ಚ್ ಮಾಡಿದಾಗ debtconsolidationsquad.com ಎಂಬ ಜಾಲತಾಣದಲ್ಲಿ ಕಂಡು ಬಂದಿದ್ದ ಲೇಖನವಾಗಿತ್ತು. ಈ ವಿಷಯ ಬೆಳಕಿಗೆ ಬಂದ ಬಳಿಕ ಆ ಈ ವೆಬ್‌ಸೈಟ್ ಲಿಂಕನ್ನು ಗೂಗಲ್ ತೆಗೆದುಹಾಕಿತ್ತು.
ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಕನ್ನಡ ಭಾಷೆಯ ಬಗ್ಗೆ ಕೀಳಾಗಿ ಮಾತಾಡಿದರೆ ಸಹಿಸಲಾಗುವುದಿಲ್ಲ, ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಿಗೆ ಕಾನೂನು ಇಲಾಖೆಯ ಜೊತೆಗೂಡಿ ಚರ್ಚಿಸಿ ಕೂಡಲೇ ಗೂಗಲ್‌ಗೆ ನೋಟಿಸ್ ನೀಡಲು ಸೂಚಿಸಲಾಗಿದೆ. ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಕ್ತಾರರು ಪ್ರತಿಕ್ರಿಯಿಸಿದ್ದರು.