ಬೆಂಗಳೂರು: ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಳೆಗೆ 302 ಜನ ಬಲಿಯಾಗಿದ್ದು, ದೇಶದಲ್ಲಿ 2018-19ರಿಂದ 2021-22ರ ಆ.3ರವರೆಗೆ 7,467 ಮಂದಿ ಮೃತಪಟ್ಟಿದ್ದಾರೆ. 35,20,467 ಮನೆಗಳು, ಲಕ್ಷಾಂತರ ಹೆಕ್ಟರ್ ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆ ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ವಿವಿಧ ರಾಜ್ಯಗಳ ಮಳೆ ಅನಾಹುತದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
3 ವರ್ಷಗಳಲ್ಲಿ ಕರ್ನಾಟಕದಲ್ಲಿ 1,78,722 ಮನೆಗಳಿಗೆ ಹಾನಿಯಾಗಿದ್ದು, 2,934 ಲಕ್ಷ ಹೆಕ್ಟರ್ ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ (ಎಸ್ಡಿಆರ್ಎಫ್) 2018-19ರಲ್ಲಿ 320 ಕೋಟಿ ರೂ., 2019-20ರಲ್ಲಿ 336 ಕೋಟಿ ರೂ., 2020-21ರಲ್ಲಿ 1,054 ಕೋಟಿ ರೂ. ಹಾಗೂ 2021-22ರಲ್ಲಿ 1,054 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಎಸ್ಡಿಆರ್ಎಫ್ನಡಿ 2018-19ರಿಂದ 2021-22ರವರೆಗೆ ಒಟ್ಟು 1,599 ಕೋಟಿ ರೂ.ಅನುದಾನ ಕೊಟ್ಟಿದೆ.
ದೇಶದ ಇತರ ರಾಜ್ಯಗಳಿಗಿಂತ ಅತಿ ಹೆಚ್ಚು ಮಂದಿ (970) ಮಧ್ಯ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 968, ಮಹಾರಾಷ್ಟ್ರದಲ್ಲಿ 875 ಜನರು ಅಸುನೀಗಿದ್ದಾರೆ. ಕೇರಳ 764, ಹಿಮಾಚಲ ಪ್ರದೇಶ 594, ಗುಜರಾತ್ 503, ಉತ್ತರ ಪ್ರದೇಶ 360, ಅಸ್ಸಾಂ 303, ಕರ್ನಾಟಕ 302, ಉತ್ತರಾಖಂಡ 266 ಹಾಗೂ ತಮಿಳುನಾಡು 220 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋದರೆ, ಕೆಲವರು ಭೂಕುಸಿತದಿಂದ ಪ್ರಾಣ ಬಿಟ್ಟಿದ್ದಾರೆ. ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳ ಸೇರಿ ದೇಶದ ಇತರ ರಾಜ್ಯಗಳಲ್ಲಿ ಚಂಡಮಾರುತದಿಂದ ಹೆಚ್ಚು ಅನಾಹುತಗಳು ಸಂಭವಿಸಿವೆ. ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಸಂದರ್ಭ ಹೆಚ್ಚು ಹಾನಿಯಾದರೆ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನೆರೆಯಿಂದ ಅವಘಢ ಸಂಭವಿಸಿದೆ.
51,730 ಕೋಟಿ ರೂ. ಪರಿಹಾರ: ಎಸ್ಡಿಆರ್ಎಫ್ ಎಲ್ಲ ರಾಜ್ಯಗಳಿಗೆ 2018-19ರಲ್ಲಿ 9,658 ಕೋಟಿ ರೂ., 2019-20ರಲ್ಲಿ 10,937 ಕೋಟಿ ರೂ., 2020-21ರಲ್ಲಿ 22,262 ಕೋಟಿ ರೂ. ಹಾಗೂ 2021-22ರಲ್ಲಿ 8.873 ಕೋಟಿ ರೂ. ಸೇರಿ ಒಟ್ಟಾರೆ 51,730 ಕೋಟಿ ರೂ. ಪರಿಹಾರ ಕೊಟ್ಟಿದೆ. ಕೇಂದ್ರ ಸರ್ಕಾರವೂ ದೇಶದ ಇತರ ರಾಜ್ಯಗಳಿಗಿಂತ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಟ್ಟಿದೆ.
ಎಲ್ಲೆಲ್ಲಿ ಹೆಚ್ಚು ಅನಾಹುತ?: ಪ್ರತಿ ವರ್ಷ ಮಳೆ ಹಾಗೂ ಪ್ರವಾಹದಿಂದ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉ.ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಳಗಾವಿ, ಕಲಬುರಗಿ ಮತ್ತು ಯಾದಗಿರಿ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೆಚ್ಚು ಅನಾಹುತ ಸಂಭವಿಸುತ್ತಿವೆ. ಆದರೆ ಕೇಂದ್ರ, ರಾಜ್ಯ ಸರ್ಕಾರದಿಂದ ನೂರಾರು ಕೋಟಿ ರೂ. ಅನುದಾನ ಬಿಡುಗಡೆಯಾದರೂ ಜನರಿಗೆ ಇನ್ನೂ ಪರಿಹಾರ ಹಾಗೂ ಮನೆಗಳನ್ನು ನಿರ್ವಣವಾಗಿಲ್ಲ ಎಂಬ ದೂರುಗಳಿವೆ.
ಜನರಿಗೆ ಪರಿಹಾರ ಸಿಕ್ಕಿಲ್ಲ: ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯವು 2018-19ರಲ್ಲಿ ಪ್ರವಾಹದಿಂದಾಗಿ 575 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ 525 ಕೋಟಿ ರೂ. ಬಿಡುಗಡೆ ಆಗಿತ್ತು. 2019-20ರಲ್ಲಿ 3,894 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ಸಲ್ಲಿಸಿದ್ದ ಪ್ರಸ್ತಾವನೆ ಕೇಂದ್ರ ಕೇವಲ 1,652 ಕೋಟಿ ರೂ. ಬಿಡುಗಡೆ ಮಾಡಿತ್ತು. 2020-21ರಲ್ಲಿ 755 ಕೋಟಿ ರೂ.ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಕೇಂದ್ರ 577 ಕೋಟಿ ರೂ. ಕೊಟ್ಟಿದೆ. ಆದರೆ, 2019-20ರಲ್ಲಿ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಹೆಚ್ಚು ನಷ್ಟವಾಗಿತ್ತು. ಆದರೆ, ರಾಜ್ಯ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸಿ ನೆಪ ಮಾತ್ರಕ್ಕೆ ಅನುದಾನ ಬಿಡುಗಡೆ ಮಾಡಿದೆ.
ಪ್ರವಾಹದಿಂದ ಆಗಿರುವ ಹಾನಿ ಅಧ್ಯಯನ ಕ್ಕಾಗಿ ಕೇಂದ್ರದ ತಂಡ ರಾಜ್ಯಕ್ಕೆ ಬರುತ್ತಿದೆ. ಇಲ್ಲಿ ಆಗಿರುವ ಹಾನಿಯನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಕೇಂದ್ರದಿಂದ ಹೆಚ್ಚಿನ ನೆರವು ಸಿಗುವ ವಿಶ್ವಾಸವಿದೆ.
| ಆರ್.ಅಶೋಕ್ ಕಂದಾಯ ಸಚಿವ
ಇಂದಿನಿಂದ ಕೇಂದ್ರದ ನೆರೆ ಹಾನಿ ತಂಡ ಪ್ರವಾಸ
ಬೆಂಗಳೂರು: ರಾಜ್ಯದ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡ ಶನಿವಾರದಿಂದ ನಾಲ್ಕು ದಿನಗಳ ಕಾಲ ಅಧ್ಯಯನ ನಡೆಸಲಿದ್ದು, ಈ ತಂಡಕ್ಕೆ ಸಲ್ಲಿಸಲು 5690.52 ಕೋಟಿ ರೂ. ನಷ್ಟದ ಅಂದಾಜು ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ. ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಶೀಲ್ ಪಾಲ್ ನೇತೃತ್ವದಲ್ಲಿ ಏಳು ಅಧಿಕಾರಿಗಳ ತಂಡ ಆಗಮಿಸುತ್ತಿದ್ದು, ಶನಿವಾರ ಸಂಜೆ 4 ಗಂಟೆಗೆ ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಚರ್ಚೆ ನಡೆಸಲಿದೆ. ಆಧಿಕಾರಿಗಳು ಮೂರು ತಂಡವಾಗಿ ಬೆಳಗಾವಿ, ಬಾಗಲಕೋಟೆ, ಧಾರವಾರ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಸೆ.5 ಮತ್ತು 6ರಂದು ಬೆಳಗಾವಿ ಜಿಲ್ಲೆಯಲ್ಲಿ ಸುಶೀಲ್ ಪಾಲ್, ಕೃಷಿ ಸಚಿವಾಲಯದ ಡಾ.ಕೆ.ಮನೋಹರನ್, ಇಂಧನ ಸಚಿವಾಲಯದ ಶುಭಂಗರ್ಗ್ ತಂಡ ಪ್ರವಾಸ ಮಾಡಲಿದೆ. ರಾಜ್ಯ ಉಸ್ತುವಾರಿ ಕೋಶದ ಆಯುಕ್ತ ಡಾ.ಮನೋಜ್ರಾಜನ್ ಈ ತಂಡದೊಂದಿಗೆ ಇರಲಿದ್ದಾರೆ. ಜಲಶಕ್ತಿ ಸಚಿವಾಲಯದ ಜೆ.ಗುರುಪ್ರಸಾದ್, ಹಣಕಾಸು ಸಚಿವಾಲಯದ ಮಹೇಶ್ಕುಮಾರ್ ಬಾಗಲಕೋಟೆ, ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು, ರಾಜ್ಯದ ವಿಜ್ಞಾನಿ ಎಸ್.ಎಸ್.ಎಂ.ಗವಾಸ್ಕರ್ ಈ ತಂಡದೊಂದಿಗೆ ಇರಲಿದ್ದಾರೆ. ರಸ್ತೆ ಸಾರಿಗೆ ಸಚಿವಾಲಯದ ಎಸ್.ವಿಜಯಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೈಲಾಸ್ಕುಮಾರ್ ಶುಕ್ಲಾ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು, ಹಿರಿಯ ಸಲಹೆಗಾರರಾದ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ಅವರು ತಂಡದಲ್ಲಿರಲಿದ್ದಾರೆ.
ರಾಜ್ಯದ ಮನವಿ: ರಾಜ್ಯದಲ್ಲಿ ಒಟ್ಟಾರೆ 5690.52 ಕೋಟಿ ರೂ. ಹಾನಿಯಾಗಿದ್ದು, ಎಸ್ಡಿಆರ್ಎಫ್ ನಿಯಮಗಳ ಪ್ರಕಾರ, 765.84 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುತ್ತಿದೆ.