Breaking News

ಎತ್ತಿನ ಬಂಡಿ ಓಟ: ‘ಸುಪ್ರೀಂ’ ಆದೇಶ ಪಾಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ

Spread the love

ಬೆಂಗಳೂರು: ಸುಪ್ರೀಂಕೋರ್ಟ್‌ ವಿಧಿಸಿರುವ ಷರತ್ತುಗಳ ಪಾಲನೆಯನ್ನು ಖಾತರಿಪಡಿಸಿಕೊಂಡ ಬಳಿಕವೇ ಎತ್ತಿನ ಬಂಡಿಗಳ ಓಟದ ಸ್ಪರ್ಧೆಗೆ ಅನುಮತಿ ನೀಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮೈಸೂರಿನ ಪೀಪಲ್‌ ಫಾರ್‌ ಅನಿಮಲ್‌ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ‘ಪ್ರಾಣಿಗಳ ಹಿಂಸೆ ತಡೆ ಕಾಯ್ದೆ-2017 (ಎರಡನೇ ತಿದ್ದುಪಡಿ ಕಾಯ್ದೆ)ಯ ಪ್ರಕಾರ, ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಅನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ’ ಎಂದು ಹೇಳಿದೆ.

2021ರ ಮಾರ್ಚ್‌ನಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕರೇಕುರ ಗ್ರಾಮದಲ್ಲಿ ನಡೆದಿದ್ದ ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಅನುಮತಿ ನೀಡಿದ್ದನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಇಂತಹ ಎಲ್ಲ ಪ್ರಕರಣಗಳ ಮೇಲುಸ್ತುವಾರಿ ನಡೆಸುವಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ನಿರ್ದೇಶನ ನೀಡುವಂತೆಯೂ ಕೋರಿದ್ದರು.

ಯುಗಾದಿ, ಸಂಕ್ರಾಂತಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭಗಳು ಹಾಗೂ ಪ್ರಾದೇಶಿಕ ಮಟ್ಟದ ಚುನಾವಣೆಗಳ ಸಂದರ್ಭದಲ್ಲೂ ಎತ್ತಿನ ಬಂಡಿಗಳ ಓಟದ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧಿಗಳಿಂದ ತಲಾ ₹ 2,500ದಷ್ಟು ಪ್ರವೇಶ ಶುಲ್ಕ ಪಡೆಯುತ್ತಿದ್ದು, ₹ 60,000ದಿಂದ ಲಕ್ಷಗಳವರೆಗೂ ಬಹುಮಾನ ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಾಜಿ ರಾವ್‌ ಪಾಟೀಲ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌, ಜಲ್ಲಿಕಟ್ಟು ಪ್ರಕರಣದ ಜತೆಯಲ್ಲೇ ವಿಚಾರಣೆ ನಡೆಸಿತ್ತು. ‘ಎತ್ತಿನ ಬಂಡಿಗಳ ಓಟದ ಸ್ಪರ್ಧೆಯಲ್ಲಿ ಪ್ರತಿ ಎತ್ತಿನ ಬಂಡಿಗೂ ಪ್ರತ್ಯೇಕವಾದ ಪಥ ಒದಗಿಸಬೇಕು’ ಎಂಬ ಸುಪ್ರೀಂಕೋರ್ಟ್‌ ನಿರ್ದೇಶನವನ್ನು ಪಾಲಿಸುವಂತೆ ವಿಭಾಗೀಯ ಪೀಠ ತಿಳಿಸಿತು.

‘ಸ್ಪರ್ಧೆಯ ಆಯೋಜಕರು ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಪಶು ವೈದ್ಯರು, ಪ್ರಾಣಿಗಳ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹೈಕೋರ್ಟ್‌ನಿಂದ ನೇಮಕಗೊಂಡಿರುವ ಸಮಿತಿಯ ಸದಸ್ಯರು ಸ್ಪರ್ಧೆಯ ವಿಡಿಯೊ ಚಿತ್ರೀಕರಣ ಮಾಡಲು ಅವಕಾಶ ಕಲ್ಪಿಸಬೇಕು. ಎತ್ತುಗಳ ಮೂಗುದಾರ ಎಳೆಯುವುದು ಅಥವಾ ಹೊಡೆದು ಹಿಂಸಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ಷರತ್ತು ವಿಧಿಸಿತ್ತು.

‘ಪ್ರಾಣಿಗಳ ಹಿಂಸೆ ತಡೆ ಕಾಯ್ದೆ-2017 (ಎರಡನೇ ತಿದ್ದುಪಡಿ ಕಾಯ್ದೆ)ಯ ಸೆಕ್ಷನ್‌ 28-ಎ ಪ್ರಕಾರ, ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಅನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಆದರೆ, ಸುಪ್ರೀಂಕೋರ್ಟ್‌ ವಿಧಿಸಿರುವ ಎಲ್ಲ ಷರತ್ತುಗಳ ಪಾಲನೆಯನ್ನು ರಾಜ್ಯ ಸರ್ಕಾರ ಖಾತರಿಪಡಿಸಬೇಕು’ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ತಿಳಿಸಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ