Breaking News

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೃತ್ಯ? : ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ

Spread the love

ಮೈಸೂರು : ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ನಗರದ ಖಾಸಗಿ ಕಾಲೇಜೊಂದರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯ ಸಂಬಂಧ ಮೈಸೂರು- ಬೆಂಗಳೂರು ಪೊಲೀಸರ ಜಂಟಿ ತಂಡಕ್ಕೆ ಆರೋಪಿಗಳ ಸುಳಿವು ಲಭಿಸಿದ್ದು, ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಕೇರಳದ ಮೂವರು ಮತ್ತು ತಮಿಳುನಾಡಿನ ಒಬ್ಬ ವಿದ್ಯಾರ್ಥಿಯ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಅತ್ಯಾಚಾರ ಘಟನೆಯ ಬಳಿಕ ಇವರು ಮೈಸೂರಿನ ಮನೆ ಖಾಲಿ ಮಾಡಿ ಕೇರಳ ಮತ್ತು ತಮಿಳುನಾಡಿನಲ್ಲಿ ತಲೆಮರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರ ನಡೆದ ದಿನ ಮೈಸೂರಿನಲ್ಲಿದ್ದ ಈ ನಾಲ್ವರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಬುಧವಾರ ನಡೆದ ಪರೀಕ್ಷೆಗೂ ಗೈರಾಗಿದ್ದರು ಎನ್ನಲಾಗಿದೆ.

ಈ ಸುಳಿವಿನ ಆಧಾರದಲ್ಲಿ ಮೈಸೂರು ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಲು ಕೇರಳ ಮತ್ತು ತಮಿಳುನಾಡಿಗೆ ತೆರಳಿದೆ ಎಂದು ತಿಳಿದುಬಂದಿದೆ. ಘಟನೆಯ ಸಂಬಂಧ ಈಗಾಗಲೇ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸಂತ್ರಸ್ತೆಯ ಸ್ನೇಹಿತರೇ?
ಘಟನೆ ನಡೆದು 3 ದಿನಗಳಾದರೂ ಸಂತ್ರಸ್ತೆ ದೂರು, ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ದುಷ್ಕರ್ಮಿಗಳು ಈಕೆಗೆ ಪರಿಚಯದವರೇ ಎಂಬ ಅನುಮಾನ ವ್ಯಕ್ತವಾಗಿದೆ. ಆಕೆ ಹೇಳಿಕೆ ದಾಖಲಿಸದೆ, ದೂರು ನೀಡದೆ ಇರುವುದರಿಂದ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಸಂತ್ರಸ್ತೆ ದೂರು ನೀಡಲು ನಿರಾಕರಿಸಿದ್ದು, ಚೇತರಿಸಿಕೊಂಡ ಬಳಿಕ ಊರಿಗೆ ತೆರಳುವ ಯೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

3 ಲಕ್ಷ ರೂ.ಗೆ ಬೇಡಿಕೆ
ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಬಳಿಕ ನನ್ನ ತಂದೆಗೆ ಕರೆ ಮಾಡಿ 3 ಲಕ್ಷ ರೂ. ಹಣ ತರಿಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾನೆ. ನಾನು ವಾಕಿಂಗ್‌ ನಡೆಸುವ ಸ್ಥಳದಲ್ಲಿ ಸ್ನೇಹಿತೆಯ ಜತೆ ಕುಳಿತಿದ್ದಾಗ ನಾಲ್ವರು ಏಕಾಏಕಿ ಬಂದು ಹಲ್ಲೆ ನಡೆಸಿದರು. ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ನಾನು ಪ್ರಜ್ಞೆ ತಪ್ಪಿ ಬಿದ್ದೆ ಎಂದಿದ್ದಾನೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಘಟನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ