ಚಾಮರಾಜನಗರ: ಮನುಷ್ಯನಿಗೆ ಬದುಕಲು ತಿಂಗಳಿಗೆ ಐದು ಕೆಜಿ ಆಹಾರಧಾನ್ಯ ಸಾಕು ಎಂಬ ತಮ್ಮ ಹೇಳಿಕೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರು ಪುನರುಚ್ಚರಿಸಿದರು.
ತಾಲ್ಲೂಕಿನ ಕೆ.ಗುಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನಗೆ 60 ವರ್ಷ ವಯಸ್ಸಾಗಿದೆ. 2 ಚಪಾತಿ ಮೇಲೆ ಒಂದಿಷ್ಟು ಅನ್ನ ಸಾಕು’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
‘ಮುಖ್ಯಮಂತ್ರಿ ಆದರೆ 10 ಕೆಜಿ ಪಡಿತರ ಕೊಡುವುದಾಗಿ ಸಿದ್ದರಾಮಯ್ಯ ಅವರು ಘೋಷಣೆ ಮಾಡುತ್ತಾರೆ. ಹಾಗಾದರೆ, ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅವರು ಯಾಕೆ 10 ಕೆಜಿ ಕೊಡಲಿಲ್ಲ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರು ಏಳು ಕೆಜಿ ಕೊಟ್ಟಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ 5 ಕೆಜಿ ಆಗಿದೆ. ನಾವು ಅಕ್ಕಿ, ರಾಗಿ ಸೇರಿ ತಿಂಗಳಿಗೆ 5 ಕೆಜಿ ಕೊಡುತ್ತಿದ್ದೇವೆ. ಒಬ್ಬನಿಗೆ ಅಷ್ಟು ಸಾಕು’ ಎಂದು ಹೇಳಿದರು.
ಅವಕಾಶ ಕೊಡುವುದಿಲ್ಲ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗೆ ಅನುಮತಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಅರಣ್ಯ ಸಚಿವರೂ ಆಗಿರುವ ಉಮೇಶ ಕತ್ತಿ ಅವರು ಮತ್ತೆ ಸ್ಪಷ್ಟಪಡಿಸಿದರು.
‘ಜೂನ್ ತಿಂಗಳಿಗೂ ಮೊದಲೇ ಕೇಂದ್ರ ಸರ್ಕಾರಿಂದ ಪ್ರಸ್ತಾವ ಬಂದಿತ್ತು. ಅನುಮತಿ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದೇವೆ. ಅರಣ್ಯ ಹಾಗೂ ವನ್ಯಜೀವಿಗಳ ಹಿತದೃಷ್ಟಿಯಿಂದ ರಸ್ತೆ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ’ ಎಂದು ಅವರು ಹೇಳಿದರು.
Laxmi News 24×7