ಮುಂಬೈ: ವಾರ್ಷಿಕ ಆದಾಯ ಬರೋಬ್ಬರಿ ಒಂದೂವರೆ ಕೋಟಿ ರೂ. ಇದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಪೊಲೀಸ್ ಬಾಡಿಗಾರ್ಡ್ ಜೀತೇಂದ್ರ ಶಿಂಧೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವಿಭಾಗೀಯ ತನಿಖೆಗೂ ಸಹ ಆದೇಶಿಸಲಾಗಿದೆ.
ಕಾನ್ಸ್ಟೇಬಲ್ ಆಗಿರುವ ಶಿಂಧೆ ಅವರನ್ನು ಮುಂಬೈ ಪೊಲೀಸ್ ಇಲಾಖೆ ಬಚ್ಚನ್ ಅವರ ಬಾಡಿಗಾರ್ಡ್ ಆಗಿ ನೇಮಿಸಿತ್ತು. ಅನೇಕ ವರ್ಷಗಳಿಂದ ಬಿಗ್ಬಿ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿರುವ ಶಿಂಧೆ ವಿರುದ್ಧ ಇತ್ತೀಚೆಗೆ ಅಚ್ಚರಿಯ ವರದಿಯೊಂದು ಹರಿದಾಡುತ್ತಿದೆ. ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಶಿಂಧೆ ಅವರ ವಾರ್ಷಿಕ ಆದಾಯ ಒಂದೂವರೆ ಕೋಟಿ ರೂಪಾಯಿ.
ಈ ವಿಚಾರ ಮುಂಬೈ ಪೊಲೀಸರ ಕಣ್ಣನ್ನು ಕೆಂಪಾಗಿಸಿದ್ದು, ಅವರನ್ನು ವರ್ಗಾವಣೆ ಮಾಡಿ ತನಿಖೆಗೆ ಆದೇಶಿಸಿದೆ. ಶಿಂಧೆ ಬಚ್ಚನ್ ಅವರಿಂದ ಅಥವಾ ಬೇರೆ ಯಾರಾದರಿಂದ ಹಣ ಪಡೆಯುತ್ತಿದ್ದರಾ? ಎಂಬ ಮೂಲವನ್ನು ಹುಡುಕಿ ಹೊರಟಿದ್ದಾರೆ.
ಶಿಂಧೆ ವಿಚಾರಣೆ ಸಹ ಎದುರಿಸಿದ್ದಾರೆ. ತಾನೊಂದು ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿರುವುದಾಗಿ ಹೇಳಿರುವ ಶಿಂಧೆ ತಮ್ಮ ಏಜೆನ್ಸಿ ಮೂಲಕ ಸೆಲೆಬ್ರಿಟಿಗಳಿಗೆ ಹಾಗೂ ಹೆಸರಾಂತ ವ್ಯಕ್ತಿಗಳಿಗೆ ಬಾಡಿಗಾರ್ಡ್ಗಳನ್ನು ಒದಗಿಸುತ್ತೇವೆ ಎಂದಿದ್ದಾರೆ. ಇನ್ನು ನಮ್ಮ ಏಜೆನ್ಸಿ ನನ್ನ ಪತ್ನಿಯ ಹೆಸರಲ್ಲಿದೆ. ನನಗೆ ಬಚ್ಚನ್ ಅವರು ಹಣ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ ಓರ್ವ ಸಿಬ್ಬಂದಿಯನ್ನು 5 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರಿಸುವಂತಿಲ್ಲ, ಹೀಗಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿಯೂ ಇದೆ. ಶಿಂಧೆ ಅವರು 2015ರಿಂದಲೂ ಬಚ್ಚನ್ ಅವರಿಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಶಿಂಧೆಯೊಂದಿಗೆ ಇಬ್ಬರು ಕಾನ್ಸ್ಟೇಬಲ್ಗಳನ್ನು ಸಹ ಪೋಸ್ಟ್ ಮಾಡಲಾಗಿತ್ತು. ಬಚ್ಚನ್ ಇರುತ್ತಿದ್ದ ಎಲ್ಲ ಸ್ಥಳಗಳಲ್ಲಿಯು ಶಿಂಧೆ ಇರುತ್ತಿದ್ದರು. ಇದೀಗ ಅವರ ಆದಾಯ ಮೂಲ ಅವರನ್ನು ಬಚ್ಚನ್ನಿಂದ ದೂರ ಮಾಡಿದ್ದು, ಸದ್ಯ ದಕ್ಷಿಣ ಮುಂಬೈ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.