ಬೆಂಗಳೂರು: ರಾಜ್ಯದಲ್ಲಿ ಹಗರಣಗಳ ಸರ್ಕಾರವಿದ್ದು, ಆರೋಗ್ಯ ಕ್ಷೇತ್ರದ ಔಷಧ, ವೆಂಟಿಲೇಟರ್, ಆಯಂಬುಲೆನ್ಸ್ ವಿಚಾರದಲ್ಲೂ ಹಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕೇಂದ್ರ ಸರ್ಕಾರ 4 ಕೋಟಿ ರೂ.ಗೆ ಖರೀದಿಸಿದ್ದನ್ನು ರಾಜ್ಯ ಸರ್ಕಾರ 22 ಕೋಟಿ ರೂ.ಗೆ ಖರೀದಿ ಮಾಡುವಷ್ಟರ ಮಟ್ಟಿಗೆ ಹಗರಣದಲ್ಲಿ ಮುಳುಗಿದೆ ಎಂದು ಟೀಕಿಸಿದರು.
ಕೋವಿಡ್ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗದ ಸಮಯದಲ್ಲಿ ಸ್ವೆಟರ್ ಖರೀದಿ ಟೆಂಡರ್ ನಡೆಸಿ ಮಕ್ಕಳಿಗೆ ಸ್ವೆಟರ್ ನೀಡದೇ ಹಗರಣ ನಡೆಸಲಾಗಿದೆ. ಈ ಹಗರಣದಲ್ಲಿ ಕೋಮಲ್, ಜಗ್ಗೇಶ್ ಅವರು ಭಾಗಿಯಾಗಿದ್ದಾರೋ, ಇಲ್ಲವೋ ನಾನು ಮಾತನಾಡಲು ಹೋಗುವುದಿಲ್ಲ. ಆದರೆ, ಈ ಹಗರಣದ ಬಗ್ಗೆ ಮುಖ್ಯಮಂತ್ರಿಯವರು ಉತ್ತರಿಸಲಿ ಎಂದು ಆಗ್ರಹಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿ, ಬಂಧನವಾದರೂ ಚಿಂತೆಯಿಲ್ಲ, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಬೇರೆಯವರ ವಿರುದ್ಧವೂ ನಮ್ಮ ಕಾರ್ಯಕರ್ತರು ಹೋರಾಡುತ್ತಾರೆ ಎಂದು ತಿಳಿಸಿದರು.
ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ನಮ್ಮ ಸರ್ಕಾರವೇ 160 ಕೋಟಿ ರೂ.ವೆಚ್ಚ ಮಾಡಿ ಗಣತಿ ನಡೆಸಿದ್ದು, ಈ ಮಾಹಿತಿ ವ್ಯರ್ಥವಾಗದೇ, ಇದು ಜನರಿಗೆ ಸಿಗುವಂತಾಗಬೇಕು.
-ಡಿ.ಕೆ.ಶಿವಕುಮಾರ್
Laxmi News 24×7