Breaking News

ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ದೃಢ

Spread the love

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರು ಮಾದಕ ವಸ್ತು ಸೇವನೆ ಮಾಡಿದ್ದ ಸಂಗತಿ ‘ಕೂದಲು ಮಾದರಿ’ ಪರೀಕ್ಷೆಯಿಂದ ದೃಢಪಟ್ಟಿದೆ.

ಅದರ ವರದಿ ಸಮೇತ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ್ದಾರೆ.

ತಮ್ಮದೇ ಜಾಲ ರೂಪಿಸಿಕೊಂಡು ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆರೋಪಿಗಳು, ಡ್ರಗ್ಸ್ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದರು. ಕೆಲ ನಟ-ನಟಿಯರು, ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂಥ ಪಾರ್ಟಿ ಬಗ್ಗೆ ಮಾಹಿತಿ ಕಲೆಹಾಕಿದ್ದ ಸಿಸಿಬಿ ಪೊಲೀಸರು, ಚುರುಕಿನ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಜಾಲ ಭೇದಿಸಿದ್ದರು.

ಆರೋಪಿಗಳಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ದೆಹಲಿಯ ವಿರೇನ್ ಖನ್ನಾ, ಮಾಜಿ ಸಚಿವ ಜೀವರಾಜ ಆಳ್ವ ಪುತ್ರ ಆದಿತ್ಯ ಆಳ್ವ, ಬಿ.ಕೆ. ರವಿಶಂಕರ್, ವಿನಯ್‌ಕುಮಾರ್, ಶ್ರೀನಿವಾಸ್ ಸುಬ್ರಮಣಿಯನ್, ರೂಪದರ್ಶಿ ನಿಯಾಜ್, ರಾಹುಲ್‌ ತೋನ್ಸೆ, ಲೊಮ್ ಪೆಪ್ಪರ್ ಸೇರಿದಂತೆ 16 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಇವರೆಲ್ಲರ ವಿರುದ್ಧ 2,900 ಪುಟಗಳ ದೋಷಾರೋಪ ಪಟ್ಟಿಯನ್ನು ಫೆಬ್ರುವರಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜೈಲು ವಾಸದಲ್ಲಿದ್ದ ಆರೋಪಿಗಳಿಗೆ ಜಾಮೀನು ಸಹ ಮಂಜೂರಾಗಿತ್ತು.

ತಿರುವು ನೀಡಿದ ಕೂದಲು: ಪ್ರಕರಣದಲ್ಲಿ ತಮ್ಮದೇನು ಪಾತ್ರವಿಲ್ಲವೆಂದು ವಾದಿಸಿದ್ದ ಆರೋಪಿಗಳು, ಜೀವನದಲ್ಲಿ ಒಮ್ಮೆಯೂ ಡ್ರಗ್ಸ್ ಸೇವಿಸಿಲ್ಲವೆಂದು ಹೇಳುತ್ತಿದ್ದರು. ಇದೀಗ ಕೂದಲು ಮಾದರಿ ವರದಿ ಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

‘ಡ್ರಗ್ಸ್ ಸೇವನೆ ಪತ್ತೆ ಮಾಡುವಲ್ಲಿ ಕೂದಲು ಮಾದರಿ ಮಹತ್ವದ ಪಾತ್ರ ವಹಿಸುತ್ತದೆ. 2020ರ ಡಿಸೆಂಬರ್ 5ರಂದು ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಇತ್ತೀಚೆಗೆ ಬಂದಿದ್ದು, ಆರೋಪಿಗಳು ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವಿರೇನ್ ಖನ್ನಾ, ಬಿ.ಕೆ. ರವಿಶಂಕರ್, ರಾಹುಲ್ ತೋನ್ಸೆ ಹಾಗೂ ಲೋ ಪೆಪ್ಪರ್ ಡ್ರಗ್ಸ್ ಸೇವಿಸಿದ್ದು ವರದಿಯಿಂದ ಗೊತ್ತಾಗಿದೆ. ಆದಿತ್ಯ ಅಳ್ವ, ಶ್ರೀನಿವಾಸ್ ಹಾಗೂ ಇತರೆ ಆರೋಪಿಗಳ ವರದಿ ಬರುವುದು ಬಾಕಿ ಇದೆ’ ಎಂದೂ ತಿಳಿಸಿದರು.

‘ಹೊಸ ಪದ್ಧತಿಯಲ್ಲಿ ಯಶಸ್ಸು’:

‘ಎನ್‌ಡಿಪಿಎಸ್ ಪ್ರಕರಣದಲ್ಲಿ ಆರೋಪಿಗಳ ಮೂತ್ರ ಹಾಗೂ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತಿತ್ತು. ಒಂದೆರಡು ದಿನದ ಡ್ರಗ್ಸ್ ಫಲಿತಾಂಶ ಮಾತ್ರ ಸಿಗುತ್ತಿತ್ತು. ಹೊಸ ಪದ್ಧತಿಯಲ್ಲಿ ಕೂದಲು ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ ವರ್ಷದ ಡ್ರಗ್ಸ್ ಸೇವನೆ ಫಲಿತಾಂಶ ದೊರೆಯುತ್ತಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳ ಕೂದಲು ಮಾದರಿ ವರದಿ ನಮ್ಮ ಕೈ ಸೇರಿದೆ. ಇದರಿಂದ ಸಿಸಿಬಿ ಪೊಲೀಸರಿಗೆ ಯಶಸ್ಸು ಸಿಕ್ಕಿದೆ. ಪ್ರಕರಣದಲ್ಲಿ ತಿಂಗಳುಗಟ್ಟಲೇ ತಲೆಮರೆಸಿಕೊಂಡು ಸಿಕ್ಕಿಬೀಳುವ ಆರೋಪಿಗಳ ಡ್ರಗ್ಸ್ ಸೇವನೆ ಪತ್ತೆ ಹಚ್ಚಲು ಹೊಸ ಪದ್ಧತಿ ಅನುಕೂಲವಾಗಿದೆ’ ಎಂದೂ ತಿಳಿಸಿದರು.

ಆರಂಭದಲ್ಲಿ ಎಡವಿದ್ದ ಸಿಸಿಬಿ:

ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಲು ಮುಂದಾಗಿದ್ದ ಸಿಸಿಬಿ ಪೊಲೀಸರು, ಆರಂಭದಲ್ಲೇ ಎಡವಿದ್ದರು. ಅವೈಜ್ಞಾನಿಕವಾಗಿ ಆರೋಪಿಗಳ ಕೂದಲು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಮಾದರಿಯನ್ನು ವಾಪಸ್‌ ಕಳುಹಿಸಿದ್ದ ಪ್ರಯೋಗಾಲಯದ ತಜ್ಞರು, ‘ತಲೆ ಕೂದಲು ಮಾದರಿ ಕಳುಹಿಸಿರುವ ವಿಧಾನ ವೈಜ್ಞಾನಿಕವಾಗಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು. ತಪ್ಪು ತಿದ್ದಿಕೊಂಡ ಪೊಲೀಸರು, ಎರಡನೇ ಬಾರಿ ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಕಳುಹಿಸಿದ್ದರು. ಈಗ ಅದೇ ವರದಿ ಪ್ರಕರಣಕ್ಕೆ ಪ್ರಮುಖ ಪುರಾವೆ ಆಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ