ಬೆಂಗಳೂರು, ಆ.25: ‘ಈ ಸರ್ಕಾರ ಆರೋಗ್ಯ ಕ್ಷೇತ್ರ, ಔಷಧ, ವೆಂಟಿಲೇಟರ್, ಆಯಂಬುಲೆನ್ಸ್ ವಿಚಾರವಾಗಿ ಹಗರಣ ಮಾಡುತ್ತಿದೆ ಎಂದು ನಾನು ಆಂಭದಿಂದಲೇ ಹೇಳುತ್ತಾ ಬಂದಿದ್ದೇನೆ. ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರವಾಗಿದೆ. ಕೇಂದ್ರ ಸರ್ಕಾರ 4 ಕೋಟಿ ರುಪಾಯಿಗೆ ಖರೀದಿಸಿದ್ದನ್ನು, ರಾಜ್ಯ ಸರ್ಕಾರ 22 ಕೋಟಿ ರುಪಾಯಿಗೆ ಖರೀದಿ ಮಾಡುವಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗ ಮಕ್ಕಳಿಗೆ ನೀಡುವ ಸ್ವೆಟರ್ ನಲ್ಲೂ ಹಗರಣ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದಾಶಿವ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಜ್ಯ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
‘ಕೋವಿಡ್ ಸಮಯದಲ್ಲಿ, ಮಕ್ಕಳು ಶಾಲೆಗೆ ಹೋಗದ ಸಮಯದಲ್ಲಿ, ಅವರಿಗೆ ಸ್ವೆಟರ್ ನೀಡದೇ ಹಗರಣ ನಡೆಸಲಾಗಿದೆ. ಈ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಗರಣ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಲಾ ಮಕ್ಕಳಿಗೆ ಸ್ವೆಟರ್ ನೀಡುವ ಹಗರಣದಲ್ಲಿ ಕೋಮಲ್, ಜಗ್ಗೇಶ್ ಅವರು ಭಾಗಿಯಾಗಿದ್ದಾರೋ, ಇಲ್ಲವೋ ಎಂಬುದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಒಂದು ಸರ್ಕಾರ ಮಕ್ಕಳಿಗೆ ಸ್ವೆಟರ್ ನೀಡಲು ತೀರ್ಮಾನ ಮಾಡಿರುವುದು ಸಂತೋಷದ ವಿಚಾರ. ಆದರೆ ಅದಕ್ಕೆ ಒಂದು ಟೆಂಡರ್ ಕರೆಯುತ್ತಾರೆ, ಅಲ್ಲಿ ಟೆಂಡರ್ ಆಗಿ ಹಣ ನೀಡಲಾಗಿದೆ. ಹಾಗಾದರೆ ಆ ಸ್ವೆಟರ್ ಗಳು ಎಲ್ಲಿವೆ? ಯಾವ ಮಕ್ಕಳಿಗೆ ಸಿಕ್ಕಿವೆ? ಶಾಲೆ ಯಾವಾಗ ಆರಂಭವಾಗಿದೆ? ಎಂಬುದರ ಬಗ್ಗೆ ಪಾಲಿಕೆಯವರು ತಿಳಿಸಬೇಕು. ಈ ವಿಚಾರವಾಗಿ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊತ್ತು ಉತ್ತರ ನೀಡಬೇಕು ಎಂದರು.
ಪ್ರತಿಭಟನೆ ನಡೆಸದಂತೆ ಆಯುಕ್ತರೇ ಸಂಧಾನ ಸಭೆ ನಡೆಸಿದ್ದಾರೆ ಎಂದರೆ ಅವರಿಂದ ವೈಫಲ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮಟ್ಟಕ್ಕೆ ಬಿಬಿಎಂಪಿ ಆಯುಕ್ತರು ಇಳಿಯಬಾರದು. ಈ ವಿಚಾರದಲ್ಲಿ ಎಲ್ಲವೂ ನ್ಯಾಯಸಮ್ಮತವಾಗಿದ್ದರೆ ಆಯುಕ್ತರು ಎಲ್ಲವನ್ನೂ ನಿರ್ಭೀತಿಯಿಂದ ಎದುರಿಸಬೇಕು. ಅದನ್ನು ಬಿಟ್ಟು ಸಂಧಾನ ಮಾಡಿರುವುದು ನೋಡಿದರೆ ಇಲ್ಲಿ ಏನೋ ತಪ್ಪು ನಡೆದಿದೆ ಎಂಬುದು ರುಜುವಾತಾಗುತ್ತದೆ ಎಂದು ಹೇಳಿದರು.
ಇನ್ನು ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಂಧನವಾದರೂ ಚಿಂತೆಯಿಲ್ಲ, ನಮ್ಮ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಬೇರೆಯವರ ವಿರುದ್ಧವೂ ನಮ್ಮ ಕಾರ್ಯಕರ್ತರು ಹೋರಾಡುತ್ತಾರೆ’ಎಂದು ತಿಳಿಸಿದರು.
ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಾತಿ ಗಣತಿ ವರದಿ ವಿಚಾರವಾಗಿ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ನಮ್ಮ ಸರ್ಕಾರವೇ 160 ಕೋಟಿ ರೂ. ವೆಚ್ಚ ಮಾಡಿ ಈ ಜಾತಿ ಗಣತಿ ನಡೆಸಿದ್ದು, ಈ ಮಾಹಿತಿ ವ್ಯರ್ಥವಾಗದೇ, ಇದು ಜನರಿಗೆ ಸಿಗುವಂತಾಗಬೇಕು’ ಎಂದರು.
Laxmi News 24×7