ಖಾತೆ ಹಂಚಿಕೆಯಾಗಿ 20 ದಿನಗಳೇ ಕಳೆದ್ರೂ, ಸಚಿವ ಆನಂದ ಸಿಂಗ್ ಮಾತ್ರ ಅಧಿಕೃತವಾಗಿ ಇಲಾಖೆಯ ಚಾರ್ಚ್ ತೆಗೆದುಕೊಳ್ಳದೆ ಹೊಸಪೇಟೆಯಲ್ಲಿ ಬೀಡು ಬಿಟ್ಟು ವೈಲೆಂಟ್ ಸಚಿವ ಸೈಲೆಂಟ್ ಆಗಿದ್ದಾರೆ. ಆರಂಭದಲ್ಲಿ ಖಾತೆ ಕ್ಯಾತೆ ತೆಗೆದು ಗದ್ದಲ ಎಬ್ಬಿಸಿದ್ದ ಸಚಿವರು ಸದ್ಯ ಸೈಲೆಂಟ್ ಆಗಿದ್ದು, ಶಾಸಕ ರಮೇಶ್ ಜಾರಕಿಹೊಳಿ ಹಿಡಿದ ಹಾದಿ ತುಳಿತ್ತಿದ್ದಾರಾ? ಎಂಬ ಅನುಮಾನಗಳು ಶುರುವಾಗಿವೆ.
ಸರ್ಕಾರಿ ಕಾರು ಬಳಸದೆ ತಮ್ಮ ಖಾಸಗಿ ಕಾರಿನಲ್ಲಿ ಓಡಾಟ ಮಾಡ್ತಿರೋ ಸಚಿವ ಆನಂದ ಸಿಂಗ್, ಮುಂದಿನ ರಾಜಕೀಯ ನಡೆ ಕುರಿತು ಯಾವುದೇ ಸುಳಿವು ಬಿಟ್ಟುಕೊಡದೆ, ಹೊಸಪೇಟೆಯ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಸಚಿವರ ಈ ನಡೆ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಹೊಸ ಟೆನ್ಶನ್ ಶುರು ಮಾಡಿದ್ದು, ಖಾತೆ ಹಂಚಿಕೆಯಾದ್ರು ಅಧಿಕೃತವಾಗಿ ಕೆಲಸ ಶುರುಮಾಡದ ಸಚಿವರ ಮೇಲೆ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ ಎನ್ನಲಾಗಿತ್ತು.
‘ಅಭಿ ಪಿಕ್ಚರ್ ಬಾಕಿ ಹೈ, ನಾನು ಹಠವಾದಿ ಅಂದುಕೊಂಡನ್ನ ಸಾಧಿಸದೆ ಬಿಡುವುದಿಲ್ಲ’ ಅಂತ ಮಾಧ್ಯಮಗಳ ಮುಂದೆ ಘರ್ಜಿಸಿದ್ದ ಸಚಿವ ಆನಂದ್ ಸಿಂಗ್, ಈಗ ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡು ತೆರೆಮರೆಯಲ್ಲಿ ರಾಜಕೀಯ ಚದುರಂಗದಾಟ ಆರಂಭಿಸಿದ್ರಾ? ಎಂಬ ಗುಮಾನಿ ಎದ್ದಿದೆ.
ಗೋಪಾಲ ಸ್ವಾಮಿ ದೇಗುಲದಲ್ಲಿ ಪೂಜೆ ಬಳಿಕ ರಾಜಕೀಯ ವೈರಾಗ್ಯದ ಮಾತು ಮಾತನಾಡಿದ್ದ ಸಿಂಗ್, ಏಕಾಏಕಿ ತಮ್ಮ ಕಛೇರಿ ಬೋರ್ಡ್ ತೆಗೆದು ಹಾಕಿ ಪರೋಕ್ಷವಾಗಿ ಬಿಜೆಪಿ ಮೇಲೆ ಮುನಿಸಿಕೊಂಡಿದ್ರು. ಜಿಂದಾಲ್‌ಗೆ ಸಿಎಂ ಬೊಮ್ಮಾಯಿ ಬಂದ್ರೂ ಭೇಟಿ ಆಗದೆ ದೂರ ಉಳಿದಿದ್ದರು. ಸದ್ಯ ಹೊಸಪೇಟೆಯಲ್ಲಿ ಓಡಾಟ ಮಾಡ್ಕೊಂಡು ಆರಾಮಾಗಿರೋ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇನ್ನು ಯಾವಾಗ ವೈಲೆಂಟ್ ಆಗ್ತಾರೋ ಕಾದು ನೋಡಬೇಕು.