ಬೆಂಗಳೂರು: ದೇವರ ಪೂಜೆ, ರಾಜಕೀಯ ವೈರಾಗ್ಯ, ಸಿಎಂ ಸಂಧಾನ, ದೆಹಲಿ ಭೇಟಿ.. ಇಷ್ಟೆಲ್ಲಾ ಸರ್ಕಸ್ ನಡೆದ್ರೂ ಆನಂದ್ ಸಿಂಗ್ಗೆ ಮಾತ್ರ ಆನಂದವಾಗಿರೋ ಖಾತೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಆನಂದ್ ಸಿಂಗ್ ನಡೆ ಏನಾಗಿರಬಹುದು ಅನ್ನೋ ಆತಂಕ ಸಿಎಂಗೆ ಕಾಡ್ತಿದೆ. ಇದೇ ಕಾರಣಕ್ಕೆ ಸಿಎಂ ಬೊಮ್ಮಾಯಿ, ಆನಂದ್ ಸಿಂಗ್ಗೆ 3 ದಿನ ಸುಮ್ಮನಿರುವಂತೆ ಸೂಚಿಸಿದ್ದಾರೆ. ಹಾಗಾದ್ರೆ 3 ದಿನದ ನಂತ್ರ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.
ದೆಹಲಿಗೆ ಹೋದ್ರೂ ಆನಂದ್ ಸಿಂಗ್ಗೆ ಸಿಗದ ‘ಆನಂದ’!
3 ದಿನ ಸುಮ್ಮನಿರುವಂತೆ ಸಿಎಂ ಹೇಳಿದ್ದೇ ಕುತೂಹಲ!
ಸಿಎಂ ಬೊಮ್ಮಾಯಿ ಸಂಪುಟ ಸೇರಿದಾಗಿನಿಂದ ಪರಿಸರ ಪ್ರವಾಸ ಬೇಡ, ಪ್ರಬಲ ಖಾತೆಯೇ ಬೇಕು ಅಂತ ಹಠಕ್ಕೆ ಬಿದ್ದು, ಪಟ್ಟು ಸಡಿಲಿಸದೇ ಕುಳಿತಿರೋ ಆನಂದ್ ಸಿಂಗ್ ಮಾಡದ ಸರ್ಕಸ್ ಇಲ್ಲ. ದೇವಸ್ಥಾನಕ್ಕೆ ಹೋದ್ರು, ರಾಜಕೀಯ ವೈರಾಗ್ಯದ ಮಾತಾಡಿದ್ರು, ರಾಜೀನಾಮೆಯ ಸುಳಿವನ್ನೂ ಕೊಟ್ರು.. ಮಾಜಿ ಸಿಎಂ ಬಿಎಸ್ವೈ, ಹಾಲಿ ಸಿಎಂ ಬೊಮ್ಮಾಯಿ ಸಂಧಾನವನ್ನೂ ಮಾಡಿದ್ರು.. ಆದ್ರೂ ವರ್ಕೌಟ್ ಆಗದಿದ್ದಾಗ ದೆಹಲಿಗೆ ಹಾರಿ ವರಿಷ್ಠರ ಮನೆಯ ಕದವನ್ನೂ ತಟ್ಟಿದ್ರು.. ಆದ್ರೂ ಪ್ರಬಲ ಖಾತೆ ಸಿಗ್ತಾನೆ ಇಲ್ಲ. ಹೀಗಾಗಿ ಆನಂದ್ ಸಿಂಗ್ ರೋಸಿಹೋಗಿದ್ದು, ಆನಂದ್ ಸಿಂಗ್ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಇದು ಸಿಎಂಗೆ ದೊಡ್ಡ ತಲೆನೋವಾಗಿದೆ. ಅದಕ್ಕೆ ಸಿಎಂ 3 ದಿನ ಸುಮ್ಮನಿರುವಂತೆ ಸೂಚಿಸಿದ್ದಾರೆ.
3 ದಿನ ಆನಂದ್ ಸಿಂಗ್ ಮೌನ!
ದೆಹಲಿಯಲ್ಲಿದ್ದ ಆನಂದ್ ಸಿಂಗ್ಗೆ ಬಸವರಾಜ್ ಬೊಮ್ಮಾಯಿ ಕರೆ ಮಾಡಿ, ಉಪರಾಷ್ಟ್ರಪತಿ ನಿಮ್ಮ ಕ್ಷೇತ್ರಕ್ಕೆ ಬರ್ತಿದ್ದಾರೆ, ನೀವು ತಕ್ಷಣ ಕ್ಷೇತ್ರಕ್ಕೆ ಬನ್ನಿ, ಉಪರಾಷ್ಟ್ರಪತಿಗಳ ಅತಿಥಿ ಸತ್ಕಾರ ಮಾಡಿ, ಬೆಂಗಳೂರಿಗೆ ಬನ್ನಿ, ಇನ್ನೊಂದು ಬಾರಿ ಮಾತಾಡೋಣ, ಅಲ್ಲಿಯವರೆಗೆ 3 ದಿನ ಸುಮ್ಮನಿರಿ ಎಂದಿದ್ದರು. ಅದ್ರಂತೆ ಕ್ಷೇತ್ರಕ್ಕೆ ಬಂದು ಉಪರಾಷ್ಟ್ರಪತಿಗಳ ಸತ್ಕರಿಸಿದ ಆನಂದ್ ಸಿಂಗ್, ನಿನ್ನೆ ಉಪರಾಷ್ಟ್ರಪತಿ ಸತ್ಕಾರ ಮಾಡಿದ ಬಳಿಕ ನಿನ್ನೆ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಇನ್ನು ಉಪರಾಷ್ಟ್ರಪತಿ ದೆಹಲಿಗೆ ಹೋದ್ಮೇಲೆ ಆನಂದ್ ಸಿಂಗ್ ಬೆಂಗಳೂರಿಗೆ ಬರೋ ಸಾಧ್ಯತೆ ಇದೆ.
ಆನಂದ್ ಸಿಂಗ್ ಮನವೊಲಿಕೆ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ರಾಜೂಗೌಡ, ಅವ್ರಿಗೆ ಅಸಮಾಧಾನ ಇದ್ದಿದ್ದಂತೂ ಸತ್ಯ, ಆದ್ರೆ ಎಲ್ಲವೂ ಸರಿ ಹೋಗುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಬಳ್ಳಾರಿ ಪ್ರವಾಸದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ಪ್ರಯತ್ನಿಸಿದ್ರೂ ಆನಂದ್ ಸಿಂಗ್ ಮಾತ್ರ ಸಿಎಂ ಬಳಿಗೆ ಸುಳಿದಿಲ್ಲ. ಎಲ್ಲಿ ಆನಂದ್ ಸಿಂಗ್ ಬರಲಿಲ್ವಾ? ಯಾಕೆ ಇನ್ನೂ ಆನಂದ್ ಸಿಂಗ್ ಅವರ ಸಿಟ್ಟು ತಣ್ಣಗಾಗಿಲ್ವಾ ಅಂತ ಸಿಎಂ, ಸೋಮಶೇಖರ್ ರೆಡ್ಡಿ ಆಪ್ತರಲ್ಲಿ ವಿಚಾರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಆನಂದ್ ಸಿಂಗ್ಗಾಗಿ ಖುದ್ದು ಸಿಎಂ ಕಾದರೂ ಆನಂದ್ ಸಿಂಗ್ ಸಿಎಂ ಭೇಟಿಗೆ ಬಂದಿಲ್ಲ. ಆನಂದ್ ಸಿಂಗ್ರ ಈ ಎಲ್ಲಾ ನಡೆಗಳು ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆದ್ರೆ, ಸಿಎಂ ಮಾತ್ರ ಆನಂದ್ ಸಿಂಗ್ ತಮ್ಮ ಜೊತೆ ನಿರಂತರ ಸಂಪರ್ಕದಲ್ಲಿರೋದಾಗಿ ಹೇಳ್ತಿದ್ದಾರೆ.
ಒಟ್ಟಾರೆ, ಬೇಕಾದ ಖಾತೆ ಸಿಗದ ಬಗ್ಗೆ ಬಹಿರಂಗವಾಗಿಯೇ ಸಿಡಿದೆದ್ದಿರುವ ಆನಂದ್ ಸಿಂಗ್ ತಮ್ಮ ಮುಂದಿನ ನಡೆಯ ಕುರಿತು ಗುಟ್ಟುಬಿಟ್ಟುಕೊಡ್ತಿಲ್ಲ. ಇದು ಸಿಎಂ ಬೊಮ್ಮಾಯಿಗೆ ಒಳಗೊಳಗೇ ಟೆನ್ಷನ್ ಕೊಡ್ತಿದೆ ಅಂತಾ ಹೇಳಲಾಗ್ತಿದೆ. ಬಿಜೆಪಿಯಲ್ಲಿ ನಡೆಯುವ ಮುಂದಿನ ಬೆಳವಣಿಗೆಗೆಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.