Breaking News

ಶಮಿ-ಬುಮ್ರಾ ಅವರ ಅಮೋಘ ಆಲ್‌ರೌಂಡ್‌ ಪ್ರದರ್ಶನ ಲಾರ್ಡ್ಸ್‌ ವಶಪಡಿಸಿಕೊಂಡ ಭಾರತ

Spread the love

ಲಂಡನ್‌: ಶಮಿ-ಬುಮ್ರಾ ಅವರ ಅಮೋಘ ಆಲ್‌ರೌಂಡ್‌ ಪ್ರದರ್ಶನ, ಸಿರಾಜ್‌ ಅವರ ಘಾತಕ ಬೌಲಿಂಗ್‌ ಸಾಹಸದಿಂದ ಇಂಗ್ಲೆಂಡ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ 151 ರನ್ನುಗಳ ಜಯಭೇರಿ ಮೊಳಗಿಸಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಬ್ರಿಟಿಷರ ನಾಡಿನಿಂದ ಭರ್ಜರಿ ಉಡುಗೊರೆಯೊಂದನ್ನು ರವಾನಿಸಿದೆ.

272 ರನ್ನುಗಳ ಗುರಿ ಪಡೆದ ಆಂಗ್ಲರ ಪಡೆ 51.5 ಓವರ್‌ಗಳಲ್ಲಿ 120ಕ್ಕೆ ಕುಸಿಯಿತು. ಸಿರಾಜ್‌ 4, ಬುಮ್ರಾ 3, ಇಶಾಂತ್‌ 2 ವಿಕೆಟ್‌ ಉಡಾಯಿಸಿ ರೂಟ್‌ ಬಳಗಕ್ಕೆ ಭಾರೀ ಆಘಾತವಿಕ್ಕಿದರು. 4ನೇ ದಿನ ಸೋಲಿನ ಅಪಾಯದಲ್ಲಿದ್ದ ಕೊಹ್ಲಿ ಪಡೆ ಐತಿಹಾಸಿಕ ಜಯದೊಂದಿಗೆ ಸರಣಿ ಮುನ್ನಡೆ ಸಾಧಿಸಿತು.

ಶಮಿ-ಬುಮ್ರಾ ದಿಟ್ಟ ಆಟ :

ಅಂತಿಮ ದಿನದಾಟದಲ್ಲಿ ಹೆಚ್ಚಿನ ಅಪಾಯ ಭಾರತದ ಮೇಲಿತ್ತು. ಇದನ್ನು ಹೋಗಲಾಡಿಸಿದ ಶಮಿ ಮತ್ತು ಬುಮ್ರಾ ಇಂಗ್ಲೆಂಡ್‌ ಮೇಲೆ ಒತ್ತಡ ಹೇರುವಂತೆ ಮಾಡಿದರು.

6ಕ್ಕೆ 181 ರನ್‌ ಮಾಡಿ ತೀವ್ರ ಸಂಕಟದಲ್ಲಿದ್ದ ಕೊಹ್ಲಿ ಪಡೆ ಅಂತಿಮ ದಿನ ರಿಷಭ್‌ ಪಂತ್‌ ಮೇಲೆ ಭಾರೀ ನಿರೀಕ್ಷೆ ಇರಿಸಿತ್ತು. ಆದರೆ ಸ್ಕೋರ್‌ 197 ತಲುಪಿದಾಗ ಪಂತ್‌ (22) ಆಟ ಮುಗಿಸಿ ವಾಪಸಾದರು. ಇಶಾಂತ್‌ ಶರ್ಮ (16) ಕೂಡ ಇವರ ಹಾದಿ ಹಿಡಿದರು. 209ಕ್ಕೆ ಭಾರತದ 8 ವಿಕೆಟ್‌ ಬಿದ್ದಾಗ ಇಂಗ್ಲೆಂಡ್‌ ಕೈ ಮೇಲಾಗಿತ್ತು.

ಆದರೆ ಶಮಿ-ಬುಮ್ರಾ ಬ್ಯಾಟ್ಸ್‌ಮನ್‌ಗಳನ್ನೂ ಮೀರಿಸುವ ರೀತಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡಾಗ ಭಾರತ ಚೇತರಿಕೆಯ ಹಾದಿ ಹಿಡಿಯಿತು. 120 ಎಸೆತಗಳನ್ನು ನಿಭಾಯಿಸಿದ ಈ ಜೋಡಿ ಇಂಗ್ಲೆಂಡ್‌ ಬೌಲಿಂಗಿನ ಎಲ್ಲ ರೀತಿಯ ತಂತ್ರಕ್ಕೂ ತಕ್ಕ ಉತ್ತರ ಕೊಟ್ಟಿತು; ಮುರಿಯದ 9ನೇ ವಿಕೆಟಿಗೆ 89 ರನ್‌ ಪೇರಿಸಿತು.

ಈ ಸೊಗಸಾದ ಜತೆಯಾಟದ ವೇಳೆ ಶಮಿ ದ್ವಿತೀಯ ಅರ್ಧ ಶತಕದ ಸಂಭ್ರಮ ಆಚರಿಸಿದರು. 70 ಎಸೆತ ಎದುರಿಸಿದ ಶಮಿ 5 ಫೋರ್‌ ಹಾಗೂ ಒಂದು ಸಿಕ್ಸರ್‌ ಸಿಡಿಸಿ ಅಜೇಯ 56 ರನ್‌ ಕೊಡುಗೆ ಸಲ್ಲಿಸಿದರು. ಬುಮ್ರಾ ಗಳಿಕೆ 64 ಎಸೆತಗಳಿಂದ ಅಜೇಯ 34 ರನ್‌ (3 ಬೌಂಡರಿ).

ಲಂಚ್‌ ವೇಳೆ ಭಾರತ 8 ವಿಕೆಟಿಗೆ 286 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ಮೊದಲ ಅವಧಿಯಲ್ಲಿ 105 ರನ್‌ ರಾಶಿ ಹಾಕಿದ ಸಾಹಸ ಭಾರತದ್ದಾಗಿತ್ತು. ಪಂದ್ಯ ಡ್ರಾ ಹಾದಿ ಹಿಡಿದುದರಿಂದ ಭಾರತ ಬ್ಯಾಟಿಂಗ್‌ ವಿಸ್ತರಿಸೀತೆಂಬ ನಿರೀಕ್ಷೆ ಇತ್ತು. ಆದರೆ ಭೋಜನ ವಿರಾಮ ಕಳೆದು 3 ಎಸೆತಗಳಾಗುವಷ್ಟರಲ್ಲಿ ಕೊಹ್ಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು.

ಬೌಲಿಂಗ್‌ನಲ್ಲೂ ಮಿಂಚು :

ಇಂಗ್ಲೆಂಡಿಗೆ 272 ರನ್‌ ಟಾರ್ಗೆಟ್‌ ನೀಡಿದ ಬಳಿಕ ಬುಮ್ರಾ, ಶಮಿ ಬೌಲಿಂಗ್‌ನಲ್ಲೂ ಮಿಂಚು ಹರಿಸಿದರು. 3ನೇ ಎಸೆತದಲ್ಲೇ ರೋರಿ ಬರ್ನ್ಸ್ ಅವರನ್ನು ಬುಮ್ರಾ ಪೆವಿಲಿಯನ್ನಿಗೆ ಅಟ್ಟಿದರೆ, ಅನಂತರದ ಓವರಿನಲ್ಲಿ ಶಮಿ ಮತ್ತೂಬ್ಬ ಓಪನರ್‌ ಸಿಬ್ಲಿ ವಿಕೆಟ್‌ ಉಡಾಯಿಸಿದರು. ಇಬ್ಬರದೂ ಶೂನ್ಯ ಗಳಿಕೆ. ಆಗ ಇಂಗ್ಲೆಂಡ್‌ ಸ್ಕೋರ್‌ಬೋರ್ಡ್‌ ಕೇವಲ ಒಂದು ರನ್‌ ತೋರಿಸುತ್ತಿತ್ತು.

ಹಮೀದ್‌ (9) ಮತ್ತು ಬೇರ್‌ಸ್ಟೊ (2) ಅವರಿಗೆ ಇಶಾಂತ್‌ ಶರ್ಮ ಬಲೆ ಬೀಸಿದರು. ಟೀ ವೇಳೆ 67ಕ್ಕೆ 4 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ಅಪಾಯಕ್ಕೆ ಸಿಲುಕಿತು. ಆದರೆ ರೂಟ್‌ ಇನ್ನೊಂದು ತುದಿಯಲ್ಲಿ ಬೇರೂರಿದ್ದರು.

ಟೀ ಕಳೆದು ಸ್ವಲ್ಪವೇ ಹೊತ್ತಿನಲ್ಲಿ ಇಂಗ್ಲೆಂಡ್‌ ಕಪ್ತಾನನನ್ನು ಬುಮ್ರಾ ಪೆವಿಲಿಯನ್ನಿಗೆ ಅಟ್ಟಿದಾಗ ಭಾರತದ ಗೆಲುವಿನ ಸಾಧ್ಯತೆ ಹೆಚ್ಚಿತು. ರೂಟ್‌ ಗಳಿಕೆ 33 ರನ್‌.

ಸಿಡಿದು ನಿಂತ ಸಿರಾಜ್‌ :

ಅಲಿ ಮತ್ತು ಜಾಸ್‌ ಬಟ್ಲರ್‌ ಒಂದಿಷ್ಟು ಹೋರಾಟದ ಸೂಚನೆ ನೀಡಿದರು. ಆದರೆ ಸಿರಾಜ್‌ ಸಿಡಿದು ನಿಂತರು. ಅಲಿ ಮತ್ತು ಕರನ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿ ಭಾರತದ ಪಾಳೆಯದಲ್ಲಿ ರೋಮಾಂಚನ ಮೂಡಿಸಿದರು. 7ನೇ ವಿಕೆಟ್‌ ಬಿದ್ದಾಗ ಇಂಗ್ಲೆಂಡ್‌ ಕೇವಲ 90 ರನ್‌ ಮಾಡಿತ್ತು.

9ನೇ ವಿಕೆಟಿಗೆ ದಾಖಲೆ :

ಮೊಹಮ್ಮದ್‌ ಶಮಿ-ಜಸ್‌ಪ್ರೀತ್‌ ಬುಮ್ರಾ ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ 9ನೇ ವಿಕೆಟಿಗೆ ಅತ್ಯಧಿಕ 89 ರನ್‌ ಪೇರಿಸಿ ಭಾರತೀಯ ದಾಖಲೆ ಸ್ಥಾಪಿಸಿದರು. ಇಲ್ಲಿಯೇ ನಡೆದ 1982ರ ಟೆಸ್ಟ್‌ ಪಂದ್ಯದಲ್ಲಿ ಕಪಿಲ್‌ದೇವ್‌-ಮದನ್‌ಲಾಲ್‌ 66 ರನ್‌ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.

ಇಂಗ್ಲೆಂಡ್‌ ಎದುರಿನ 2002ರ ಟ್ರೆಂಟ್‌ಬ್ರಿಜ್‌ ಟೆಸ್ಟ್‌ ಪಂದ್ಯದ ಬಳಿಕ ಭಾರತ ವಿದೇಶದಲ್ಲಿ 9ನೇ ವಿಕೆಟಿಗೆ 50 ಪ್ಲಸ್‌ ರನ್‌ ಪೇರಿಸಿತು. ಅಂದು ಹರ್ಭಜನ್‌ ಸಿಂಗ್‌-ಜಹೀರ್‌ ಖಾನ್‌ 61 ರನ್‌ ಒಟ್ಟುಗೂಡಿಸಿದ್ದರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ