ಕೆಂಡಸಂಪಿಗೆ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ರಚಿಸಿದ್ದ, “ಮರೆಯದೆ ಕ್ಷಮಿಸು” ಹಾಡು ಜನಪ್ರಿಯ ವಾಗಿದೆ.
ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದ್ದು, ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ನೆರವೇರಿತು. ನಟ ಶ್ರೀನಗರ ಕಿಟ್ಟಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ರಿಲೀಸ್ ಮಾಡಿದರು. ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್, ವೆಂಕಟೇಶ್ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದೊಂದು ಪ್ರೇಮಕಥೆ ಆಧಾರಿತ ಚಿತ್ರ. ಈ ಚಿತ್ರದಲ್ಲಿ ನಾಯಕ ಗಾರೆ ಕೆಲಸ ಮಾಡುತ್ತಿರುತ್ತಾನೆ . ಶ್ರೀಮಂತ ಹುಡುಗಿಯನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯಿಂದ ಏನೇನಾಗುತ್ತದೆ? ಕೊನೆಗೆ ಒಂದಾಗುವರಾ? ಎಂಬುದೆ ಚಿತ್ರದ ಕಥಾಸಾರಾಂಶ. ನಿರ್ಮಾಪಕರು, ನಾನು ನಲವತ್ತು ವರ್ಷಗಳ ಸ್ನೇಹಿತರು. ನಮ್ಮ ಸ್ನೇಹದ ಸವಿನೆನಪಿಗಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರೆ ತಪ್ಪಾಗಲಾರದು ಎಂದರು ನಿರ್ದೇಶಕ ರಾಫವ್. ಚಿತ್ರಕ್ಕೆ ಉತ್ತಮ ಸಂಗೀತ ನೀಡಿರುವ ಆರನ್ ಕಾರ್ತಿಕ್ ವೆಂಕಟೇಶ್ ಸೇರಿದಂತೆ ಇಡೀ ಚಿತ್ರತಂಡದ ಸಹಕಾರವನ್ನು ನಿರ್ದೇಶಕರು ಸ್ಮರಿಸಿಕೊಂಡರು. ಎಲ್ಲಾ ಅಂದು ಕೊಂಡ ಹಾಗೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ ಎಂದರು.
ಚಿತ್ರದ ನಾಯಕ ಪ್ರಮೋದ್ ಬೋಪ್ಪಣ್ಣ ಮಾತನಾಡುತ್ತಾ, ಈ ಚಿತ್ರದಲ್ಲಿ ನಾಯಕ- ನಾಯಕಿಯ ಪ್ರೇಮ, ತಾಯಿ – ಮಗನ ಬಾಂಧವ್ಯ ಹಾಗೂ ಎಲ್ಲಕ್ಕೂ ಮಿಗಿಲಾಗಿ ಉತ್ತಮ ಮನರಂಜನೆಯಿದೆ. ಇಂತಹ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು. ಆಡಿಯೋ ರಿಲೀಸ್ ಮಾಡಿಕೊಟ್ಟ ಶ್ರೀನಗರ ಕಿಟ್ಟಿ ಅವರಿಗೆ ವಿಶೇಷ ಧನ್ಯವಾದ ಎಂದರು ಪ್ರಮೋದ್ ಬೋಪ್ಪಣ್ಣ.
ನಾಯಕಿ ಮೇಫನಾ ಗೌಡ ಹಾಗೂ ಚಿತ್ರದಲ್ಲಿ ನಟಿಸಿರುವ ಮಿಮಿಕ್ರಿ ಗೋಪಿ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.
ಚಿತ್ರದ ಹಾಡುಗಳು ಹಾಗೂ ಗಾಯಕರ ಬಗ್ಗೆ ಸಂಗೀತ ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ಮಾಹಿತಿ ನೀಡಿದರು. ಇದು ಅವರು ಸಂಗೀತ ನೀಡಿರುವ ೨೨ ನೇ ಚಿತ್ರ. ಹಾಡುಗಳನ್ನು ಬಿಡುಗಡೆ ಮಾಡುತ್ತಿರುವ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಸಹ ಈ ಚಿತ್ರದ ಹಾಡುಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದರು
ನಾನು ಚಿತ್ರ ನಿರ್ಮಾಣ ಮಾಡಬೇಕೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಸ್ನೇಹಿತ ರಾಘವ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶಿವರಾಂ.
ಕೆ.ರಾಘವ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿದ್ದಾರೆ. ರಿಷಿಕೇಶ್ ಈ ಚಿತ್ರದ ಛಾಯಾಗ್ರಹಕರು.
ಪ್ರಮೋದ್ ಬೋಪ್ಪಣ್ಣ ಚಿತ್ರದ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಮೇಘನ ಗೌಡ. ರಮೇಶ್ ಭಟ್, ಮಿಮಿಕ್ರಿ ಗೋಪಿ, ರಾಕ್ ಲೈನ್ ಸುಧಾಕರ್, ಅಪೂರ್ವ, ಸಿರಿಹುಂಡೆ ರಘು ಮುಂತಾದವರು ಈ ಚಿತ್ರದ ತಾರಾಬಳಗದಲಿದ್ದಾರೆ.