ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮತ್ತೂಂದು ಸುತ್ತಿನ ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆಯೇ? ಅವರ ಚಲನವಲನ ಗಮನಿಸಿದರೆ ಅಂತಹ ಅನುಮಾನ ಮೂಡುತ್ತದೆ.
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂದಿನ ಇಡೀ ವಿದ್ಯಮಾನ ತಮ್ಮ ಸುತ್ತಲೇ ಸುತ್ತುವಂತೆ ಮಾಡಿಕೊಂಡಿದ್ದ ರಮೇಶ ಜಾರಕಿಹೊಳಿ, ಪ್ರಕರಣವೊಂದರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ಕೆಲ ದಿನಗಳವರೆಗೆ ಮೌನವಾಗಿದ್ದರು. ಬಳಿಕ ಒಂದಿಷ್ಟು ಚಟುವಟಿಕೆಗಳಿಗೆ ಮುಂದಾಗಿದ್ದರು. ಸಚಿವ ಸ್ಥಾನ ಮತ್ತೆ ಪಡೆಯುವ ನಿಟ್ಟಿನಲ್ಲಿ ತಮ್ಮದೇ ಒತ್ತಡ ತಂತ್ರಕ್ಕೆ ಮುಂದಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ನಂತರ ಮತ್ತೆ ಸಕ್ರಿಯರಾಗಿರುವ ರಮೇಶ ಜಾರಕಿಹೊಳಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲ ಶಾಸಕರ ಸಭೆ ನಡೆಸಿದ್ದರು. ಇದರಲ್ಲಿ ಕೆಲ ಶಾಸಕರು ಭಾಗಿಯಾಗಿದ್ದರು. ಶನಿವಾರ ಸಂಜೆ ದಿಢೀರನೇ ಹುಬ್ಬಳ್ಳಿಗೆ ಆಗಮಿಸಿ ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬಿಜೆಪಿಯ ಕೆಲ ಮೂಲಗಳ ಪ್ರಕಾರ ರಮೇಶ ಜಾರಕಿಹೊಳಿ ಅವರು ಜಗದೀಶ ಶೆಟ್ಟರ ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ ಕುರಿತಾಗಿ ಸಂಕ್ಷಿಪ್ತವಾಗಿ ಮಾತನಾಡಿದರು. ಮಹತ್ವದ ಬೆಳವಣಿಗೆಯಾಗುವಂತಹ ಚರ್ಚೆ ನಡೆದಿಲ್ಲ ಎನ್ನಲಾಗುತ್ತಿದೆ. ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಜಾರಕಿಹೊಳಿ ಕುಟುಂಬಕ್ಕೆ ಸಾಧ್ಯವಾಗದ ನಿಟ್ಟಿನಲ್ಲಿ ರಮೇಶ ಜಾರಕಿಹೊಳಿ ಮೊತ್ತೂಮ್ಮೆ ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಲವೇ ಕೆಲವು ಅಸಮಾಧಾನಿತ ಶಾಸಕರು ಪಾಲ್ಗೊಂಡಿದ್ದರಾದರೂ ಸ್ಪಷ್ಟ ನಿಲುವು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.
ನೂತನ ಸಚಿವ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬದಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅವಕಾಶ ನೀಡಲು ಮುಖ್ಯಮಂತ್ರಿಗಳೇ ಮುಂದಾಗಿದ್ದರು. ಆದರೆ, ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನದ ಜತೆಯಲ್ಲಿಯೇ ಸಚಿವ ಸ್ಥಾನ ನೀಡಬೇಕು, ಬೆಳಗಾವಿ ಜಿಲ್ಲೆ ಉಸ್ತುವಾರಿ ನೀಡಬೇಕೆಂಬ ಬೇಡಿಕೆ ಇರಿಸಿದ್ದರು ಎನ್ನಲಾಗಿದ್ದು, ಈ ಹಿಂದೆ ಎಚ್.ಡಿ.ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನದ ಜತೆಗೆ ಸಚಿವರಾಗಿದ್ದನ್ನು ಪ್ರಸ್ತಾಪಿಸಿದ್ದರು ಎನ್ನಲಾಗುತ್ತಿದೆ. ಬೇಡಿಕೆಗಳ ಈಡೇರಿಕೆಗೆ ಸಾಧ್ಯವಾಗದ್ದರಿಂದ ಬಾಲಚಂದ್ರ ಜಾರಕಿಹೊಳಿ ಅವರು ಸಂಪುಟ ಸೇರ್ಪಡೆ ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ.